

ಹಾಸನ: ಗೃಹಿಣಿಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯ ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಚನ್ನರಾಯಪಟ್ಟಣ ತಾಲೂಕಿನ ಗೂಳಿಹೊನ್ನೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮಿದೇವಿ(22) ಮೃತ ಗೃಹಿಣಿ.
ಲಕ್ಷ್ಮೀದೇವಿ ನೆಟ್ಟೇಕೆರೆ ಗ್ರಾಮದವರಾಗಿದ್ದು, ಗೂಳಿಹೊನ್ನೇನಹಳ್ಳಿಯ ಗುರುರಾಜ್ ಎಂಬುವರಿಗೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಅದಾದ ಬಳಿಕ ಒಂದು ಹೆಣ್ಣುಮಗುವಿಗೂ ಇವರು ಜನ್ಮ ನೀಡಿದ್ದರು. ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗು ಅನಾಥವಾಗಿದೆ.
ಹೆಣ್ಣುಮಗು ಹುಟ್ಟಿದ ಕೂಡಲೇ ಪತಿ ಮನೆಯವರ ವರಸೆಯೇ ಬದಲಾಗಿತ್ತು. ನಿಮ್ಮ ಮಗಳು ಹೆಣ್ಣು ಮಗು ಹೆತ್ತಿದ್ದಾಳೆ, ಹಾಗಾಗಿ ಐದು ಲಕ್ಷ ರೂ. ಹಣ ತೆಗೆದುಕೊಂಡು ಬಾ ಎಂದು ಆಕೆಗೆ ಕಿರುಕುಳ ನೀಡಲಾಗುತ್ತಿತ್ತು. ಆದರೆ ಆಕೆ ಹಣ ತೆಗೆದುಕೊಂಡು ಹೋಗದ ಕಾರಣ ಅವರೇ ನೇಣಿಗೆ ಹಾಕಿ ಕೊಲೆ ಮಾಡಿದ್ದಾರೆ ಎಂದು ಲಕ್ಷ್ಮೀದೇವಿ ಪಾಲಕರು ಆರೋಪ ಮಾಡಿದ್ದಾರೆ.
ಮೃತಳ ತಂದೆ ಶಿವಲಿಂಗೇಗೌಡ, ತಾಯಿ ಸುಮಿತ್ರಾರಿಂದ ಹಿರೀಸಾವೆ ಪೊಲೀಸರಿಗೆ ದೂರು ನೀಡಿದ್ದಾರೆ. ಲಕ್ಷ್ಮೀ ಪತಿಯ ಮನೆಯವರು ಬಾಗಿಲು ಹಾಕಿದ್ದು, ಮುಚ್ಚಿದ ಬಾಗಿಲ ಮುಂದೆ ಶವವನ್ನಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆಯಿಂದ ಹೊರಗೆ ಬರದೆ ಇದ್ದರೆ ಮನೆ ಮುಂದೆಯೇ ಶವಸಂಸ್ಕಾರ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ.
ಸ್ಥಳಕ್ಕೆ ಹಿರೀಸಾವೇ ಠಾಣೆ ಪೊಲೀಸರು ಭೇಟಿ ನೀಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.