

ಬೆಂಗಳೂರು: ಕುಶಲೋಪರಿ ಸೋಗಿನಲ್ಲಿ ಸ್ನೇಹಿತೆಯ ಮನೆಗೆ ಹೋದ ಮಹಿಳೆ, 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಕಳವು ಮಾಡಿದ್ದಾಳೆ.
ಕಳವು ಮಾಡಿದ್ದ ಗೆಳತಿ ಹಾಗೂ ಆಕೆ ಕದ್ದ ಒಡವೆಯನ್ನು ಇಟ್ಟುಕೊಂಡಿದ್ದ ಯುವಕನನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ನಿವಾಸಿ ಶಶಿಕಲಾ (39) ಮತ್ತು ಆಕೆಯ ಸ್ನೇಹಿತ ಪ್ರಶಾಂತ್ (23) ಬಂಧಿತರು. ಆರೋಪಿಗಳಿಂದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯ ರಾಮಚಂದ್ರಪುರದ ನಿವಾಸಿ ಭಾಗ್ಯಲಕ್ಷ್ಮೀ ಎಂಬುವರು ಬಟ್ಟೆ ವ್ಯಾಪಾರಿಯಾಗಿದ್ದಾರೆ. ವ್ಯಾಪಾರದ ವೇಳೆ ಶಶಿಕಲಾ ಪರಿಚಯವಾಗಿದ್ದಳು. ಭಾಗ್ಯಲಕ್ಷ್ಮೀ ಅವರೊಂದಿಗೆ ಕುಶಲೋಪರಿ ನಡೆಸಲು ಅ.5ರಂದು ಬೆಳಗ್ಗೆ ಶಶಿಕಲಾ ಹೋಗಿದ್ದಳು. ಭಾಗ್ಯಲಕ್ಷ್ಮೀ ಟೀ ಮಾಡಿಕೊಟ್ಟಿದ್ದರು. ಇದೇ ವೇಳೆ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಬಚ್ಚಿಟ್ಟುಕೊಂಡಿದ್ದಳು. ಭಾಗ್ಯಲಕ್ಷ್ಮೀ ಬಟ್ಟೆ ಅಂಗಡಿ ತೆರೆಯಲು ಅವಸರದಲ್ಲೇ ಹೋಗಿದ್ದರು. ರಾತ್ರಿ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಬಟ್ಟೆಗಳು ಬಿದ್ದಿರುವುದು ಕಂಡುಬಂದಿತ್ತು. ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿತ್ತು. ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಶಂಕೆ ಮೇರೆಗೆ ಶಶಿಕಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಸ್ಥಳೀಯರಿಗೆ ತಲೆನೋವಾಗಿದ್ದ ಆರು ಲೈಂಗಿಕ ಕಾರ್ಯಕರ್ತೆಯರ ಬಂಧನ
ಕದ್ದ ಚಿನ್ನಾಭರಣವನ್ನು ಭಾಗ್ಯಲಕ್ಷ್ಮೀ, ಪಕ್ಕದ ಮನೆಯಲ್ಲಿರುವ ಸ್ನೇಹಿತ ಪ್ರಶಾಂತ್ ಎಂಬಾತನ ಮನೆಯಲ್ಲಿ ಬಚ್ಚಿಟ್ಟಿದ್ದಳು. ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಪ್ರಶಾಂತ್ನನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.