

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಡಿಜಿಟಲ್ ವಹಿವಾಟನ್ನೇ ವಂಚನೆಗೆ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರೀಗ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಟೋಪಿ ಹಾಕುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸ್ಆಪ್, ಮ್ಯಾಟ್ರಿಮೋನಿಯಲ್ನಲ್ಲಿ ಅಮಾಯಕ ಯುವತಿಯರು, ಮಹಿಳೆಯರಿಗೆ ಗಾಳ ಹಾಕಿ ಲೈಂಗಿಕವಾಗಿ ಬಳಸಿಕೊಳ್ಳುವುದರ ಜತೆಗೆ ಬ್ಲಾ್ಯಕ್ವೆುೕಲ್ ಮೂಲಕವೂ ಕೋಟ್ಯಂತರ ರೂಪಾಯಿ ದೋಚುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಹೆಣ್ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ 2020ನೇ ಸಾಲಿನಲ್ಲಿ ಅಂದಾಜು 3.5 ಪಟ್ಟು ಕೇಸ್ಗಳು ಹೆಚ್ಚಾಗಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ.
ರಾಜ್ಯ ಅಪರಾಧ ದಾಖಲಾತಿ ವಿಭಾಗದ ವರದಿ ಈ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇಂದು ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ಫೋನ್ ಇರುತ್ತದೆ. ಅಗ್ಗವಾದ ಇಂಟರ್ನೆಟ್ ಸೌಲಭ್ಯ ಪಡೆಯುವ ಬಹುತೇಕ ಮಂದಿ ಫೇಸ್ಬುಕ್, ಟ್ವಿಟರ್, ವಾಟ್ಸ್ಆಪ್ ಮೋಹಕ್ಕೆ ಬಿದ್ದು ಅದರ ಮೂಲಕ ಅಪರಿಚಿತರ ಸ್ನೇಹಕ್ಕೆ ಮನಸೋಲುತ್ತಿದ್ದಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸೈಬರ್ ಖರೀಮರು ಅಮಾಯಕ ಯುವತಿಯರಿಗೆ ಬಲೆ ಬೀಸಿ ಸ್ನೇಹದ ನೆಪದಲ್ಲಿ ಸನಿಹವಾಗಿ ಸುತ್ತಾಡಿ ಪ್ರೀತಿ, ಮದುವೆ ಎಂದೆಲ್ಲ ತಲೆಕೆಡಿಸಿ ದೈಹಿಕವಾಗಿ ಬಳಸಿಕೊಂಡು ದೂರ ತಳ್ಳುತ್ತಾರೆ. ಜಾಲತಾಣದ ಸ್ನೇಹಿತರಿಂದಲೇ ಲೈಂಗಿಕ ಶೋಷಣೆಗಳು ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಇನ್ನೂ ಕೆಲವರು ಕರೊನಾ ಲಾಕ್ಡೌನ್ನಿಂದ ಕೆಲಸ ಕಳೆದು ಕೊಂಡವರನ್ನು ಟಾರ್ಗೆಟ್ ಮಾಡಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವಾಟ್ಸ್ಆಪ್ ಲೈವ್ ಇಂಟರ್ವ್ಯೂ ಎಂದು ನಂಬಿಸಿ ಯುವತಿಯರ ಖಾಸಗಿ ವಿಡಿಯೋ, ಫೋಟೋ ಪಡೆದುಕೊಳ್ಳುತ್ತಾರೆ. ಬಳಿಕ ಬೆದರಿಕೆ ಒಡ್ಡಿ ಸುಲಿಗೆ ಅಥವಾ ಮುಂಗಡ ಶುಲ್ಕವೆಂದು ಹಣ ಪಡೆದು ಮೋಸ ಮಾಡುತ್ತಿದ್ದಾರೆ. ಸೆಲ್ಪಿ ಗೀಳಿಗೆ ಬೀಳುವ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಪಿ ತೆಗೆದುಕೊಂಡು ಅಥವಾ ವಿಡಿಯೋ ಮಾಡಿಕೊಂಡು ಆ ದೃಶ್ಯಗಳನ್ನು ಜಾಲ ತಾಣಗಳಲ್ಲಿ ಹಾಕಿ ಸಂಭ್ರಮಿಸುತ್ತಾರೆ. ಅದನ್ನು ಕಿಡಿಗೇಡಿಗಳು ತಿರುಚಿ ವೈರಲ್ ಮಾಡಿ ಮರ್ಯಾದೆ ತೆಗೆಯುವ ಪ್ರಕರಣ ಬೆಳಕಿಗೆ ಬರುತ್ತಿವೆ.
ವಧು ವರಾನ್ವೇಷಣೆ ವೆಬ್ಸೈಟ್ಗಳು ವಂಚನೆ ಅಡ್ಡೆಯಾಗುತ್ತಿವೆ. ಮ್ಯಾಟ್ರಿಮೋನಿಯಲ್ನಲ್ಲಿ ನಕಲಿ ಖಾತೆ ತೆರೆದು, ವರನ ಹುಡುಕಾಟ ನಡೆಸುವ ವಿಚ್ಛೇದಿತ ಮಹಿಳೆ ಮತ್ತು ಉದ್ಯೋಗಸ್ಥ ಯುವತಿಯರನ್ನು ವಿದೇಶದಲ್ಲಿ ಕೆಲಸ, ಉದ್ಯಮಿ ಎಂದು ನಂಬಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಆನಂತರ ವಿದೇಶದಿಂದ ಉಡುಗೊರೆ, ಆಭರಣ ಕೊರಿಯರ್ ಮಾಡಿರುವುದಾಗಿ ಹೇಳುತ್ತಾರೆ. ಮತ್ತೊಬ್ಬ ವಂಚಕ ಕಸ್ಟಮ್್ಸ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ತೆರಿಗೆ ಪಾವತಿಸಿ ಪಾರ್ಸೆಲ್ ಬಿಡಿಸಿಕೊಳ್ಳುವಂತೆ ಹೇಳಿ ಲಕ್ಷಾಂತರ ರೂ. ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ವಂಚಿಸುವ ಪ್ರಕರಣಗಳು ಸೈಬರ್ ಕ್ರೖೆಂ ಠಾಣೆಯಲ್ಲಿ ಪ್ರತಿದಿನ ದಾಖಲಾಗುತ್ತಿವೆ.
ನಕಲಿ ಖಾತೆಗಳ ಹಾವಳಿ: ಲೈಂಗಿಕ ಶೋಷಣೆ, ಹಣದ ವಂಚನೆ ಉದ್ದೇಶದಿಂದಲೇ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ಲ್ಲಿ ನಕಲಿ ಖಾತೆ ತೆರೆಯುವ ಸೈಬರ್ ಖದೀಮರ ಸಂಖ್ಯೆ ಹೆಚ್ಚಾಗಿದೆ. ಕರೊನಾ ಲಾಕ್ಡೌನ್ನಿಂದ ಶುರುವಾಗಿರುವ ಆನ್ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವ ದೂರುಗಳು ಸೈಬರ್ ಕ್ರೖೆಂ ಠಾಣೆ ಮೆಟ್ಟಿಲೇರುತ್ತಿವೆ. ಮತ್ತೊಂದೆಡೆ ಪಾಲಕರಿಗೆ ಆತಂಕ ಹೆಚ್ಚಾಗಿದೆ.
ಲಾಕ್ಡೌನ್ನಲ್ಲೂ ನಿಂತಿಲ್ಲ: ಕರೊನಾ ಲಾಕ್ಡೌನ್ನಲ್ಲಿಯೂ ಮಹಿಳೆಯರ ಮೇಲಿನ ಸೈಬರ್ ಅಪರಾಧಗಳು ಕಡಿಮೆ ಆಗಿಲ್ಲ. ಜನವರಿಯಲ್ಲಿ 92 ಕೇಸು, ಫೆಬ್ರವರಿ-80, ಮಾರ್ಚ್ನಲ್ಲಿ 149 ಪ್ರಕರಣಗಳು ದಾಖಲಾಗಿದ್ದವು. ಲಾಕ್ಡೌನ್ನ ಬಳಿಕ ಏಪ್ರಿಲ್ನಲ್ಲಿ 89, ಮೇ-126, ಜೂನ್-176, ಜುಲೈ-181, ಆಗಸ್ಟ್-189, ಸೆಪ್ಟೆಂಬರ್-197 ಸೈಬರ್ ಪ್ರಕರಣಗಳು ದಾಖಲಾಗಿವೆ.