

ನವದೆಹಲಿ: ತಿರುಪತಿ ತಿರುಮಲ ದೇಗುಲದ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನೆಣ್ಣೆ ಮತ್ತಿತರ ಕಳಪೆ ಪದಾರ್ಥಗಳನ್ನು ಬಳಸಲಾಗಿದೆ ಎಂಬ ವಿವಾದ ಹಲವು ತಿರುವುಗಳನ್ನು ಪಡೆಯುತ್ತಿರುವ ಸಮಯದಲ್ಲೇ ಅಲ್ಲಿನ ಲಡ್ಡುಗಳನ್ನು ಈ ವರ್ಷ ಜನವರಿಯಲ್ಲಿ ನಡೆದ ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ನೆರೆದಿದ್ದ ಭಕ್ತರಿಗೆ ವಿತರಿಸಲಾಗಿತ್ತು ಎಂಬ ವಿಚಾರವನ್ನು ಸ್ವತಃ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರೇ ದೃಢಪಡಿಸಿದ್ದಾರೆ.
ಆಗ ತಿರುಪತಿ ದೇವಸ್ಥಾನದ 300 ಕೆಜಿ ‘ಪ್ರಸಾದ’ವನ್ನು ಭಕ್ತರಿಗೆ ಹಂಚಲಾಗಿತ್ತು ಎಂದು ದಾಸ್ ದೃಢಪಡಿಸಿದ್ದಾರೆ. ‘ಒಂದು ವೇಳೆ ಪ್ರಸಾದದಲ್ಲಿ ಪ್ರಾಣಿಯ ಕೊಬ್ಬನ್ನು ಬೆರೆಸಿದ್ದರೆ ಅದು ಕ್ಷಮಾರ್ಹವಲ್ಲ. ಅದಕ್ಕೆ ಹೊಣೆಗಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ. ಗುತ್ತಿಗೆದಾರೊಬ್ಬರು ಬಳಸಿದ್ದ ತುಪ್ಪದಲ್ಲಿ ಕೊಬ್ಬು ಮತ್ತು ಇತರ ಅಶುದ್ಧಕಾರಕ ಪದಾರ್ಥಗಳಿದ್ದುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಒಪ್ಪಿಕೊಂಡಿದೆ.
ವೈ.ಎಸ್. ಜಗನ್ವೋಹನ ರೆಡ್ಡಿ ನೇತೃತ್ವದ ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಯಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿತ್ತು ಎಂದು ಆರೋಪಿಸಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ‘ಪ್ರಸಾದ’ದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ.
ರಾಜಸ್ಥಾನ ಸರ್ಕಾರದ ಕ್ರಮ :ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ, ದೇವಸ್ಥಾನಗಳ ಭೋಗ್ ಮತ್ತು ಪ್ರಸಾದದ ಗುಣಮಟ್ಟ ಪರೀಕ್ಷಿಸಲು ಸೆಪ್ಟೆಂಬರ್ 23ರಿಂದ 26ರ ವರೆಗೆ ವಿಶೇಷ ಅಭಿಯಾನ ನಡೆಸಲು ರಾಜಸ್ಥಾನದ ಆಹಾರ ಸುರಕ್ಷತೆ ಇಲಾಖೆ ನಿರ್ಧರಿಸಿದೆ.
ಬೆಂಗಳೂರು: ತಿರುಪತಿ ಲಡ್ಡುಗೆ ಪ್ರಾಣಿ ಜನ್ಯ ಕೊಬ್ಬು ಸೇರಿಸಿ ದ್ದಾರೆ ಎಂಬ ಆರೋಪ ಕುರಿತು ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, ಲಡ್ಡುಗೆ ಪ್ರಾಣಿಜನ್ಯ ಕೊಬ್ಬು ಸೇರಿಸಿರುವ ವಿಚಾರ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬ ಆಘಾತಕಾರಿ. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದರು. ಮೊದಲೆಲ್ಲ ಕೆಎಂಎಫ್ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ತಿಳಿಸಿದರು.
ಈ ನಡುವೆ, ಕೊಬ್ಬು ಮತ್ತಿತರರ ವಸ್ತುಗಳ ಬಳಕೆಯಿಂದ ಹಾಳಾಗಿರುವ ‘ಲಡ್ಡು ಪ್ರಸಾದಂ’ನ ಪಾವಿತ್ರ್ಯವನ್ನು ಮರುಸ್ಥಾಪಿಸಲಾಗಿದೆ ಎಂದು ಟಿಟಿಡಿ ಶುಕ್ರವಾರ ಪ್ರಕಟಿಸಿದೆ. ಅಲ್ಲದೆ, ]ೕವಾರಿ ಪ್ರಸಾದಮ್ಳ ತಯಾರಿಯಲ್ಲಿ ಗೋ ಆಧಾರಿತ ಉತ್ಪನ್ನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲೂ ಟ್ರಸ್ಟ್ ನಿರ್ಧರಿಸಿದೆ.
ಹೈದರಾಬಾದ್: ಪ್ರಸಾದದಲ್ಲಿ ಕಲಬೆರಕೆ, ವೆಂಕಟೇಶ್ವರ ಸ್ವಾಮಿ ದೇಗುಲದ ಪಾವಿತ್ರ್ಯತೆಯನ್ನು ಕೆಡಿಸುವ ದುರುದ್ದೇಶಪೂರಿತ ಕೃತ್ಯ ಮತ್ತು ಹಿಂದು ಧಾರ್ವಿುಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್. ಜಗನ್ವೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. ವಕೀಲೆ ಕೆ.ಕರುಣಾ ಸಾಗರ್ ಎಂಬುವವರು ಲ್ಯಾಬ್ ವರದಿ ಉಲ್ಲೇಖಿಸಿ ಸೈದಾಬಾದ್ ದೂರು ದಾಖಲಿಸಿದ್ದಾರೆ. ಕಾನೂನು ಅಭಿಪ್ರಾಯವನ್ನು ಪಡೆದುಕೊಂಡು ಮುಂದುವರಿಯುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಡ್ಡು ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುತ್ತಿತ್ತು ಎಂಬ ವಿವಾದದ ಹಿನ್ನೆಲೆಯಲ್ಲಿ ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯೊಳಗೆ ಆಂತರಿಕ ಕಲಬೆರಕೆ ಪರೀಕ್ಷೆ ಯಂತ್ರವನ್ನು ಸ್ಥಾಪಿಸಲು ಟಿಟಿಡಿ ನಿರ್ಧರಿಸಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ಕೊಡುಗೆಯಾಗಿ ನೀಡಲಿರುವ ಉನ್ನತ ತಂತ್ರಜ್ಞಾನದ ಯಂತ್ರವನ್ನು ತುಪ್ಪದ ಗುಣಮಟ್ಟ ಪರೀಕ್ಷೆಗಾಗಿ ಸಂಸ್ಥಾಪಿಸಲಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಲಡ್ಡು ತಯಾರಿಯಲ್ಲಿ ಕಲಬೆರಕೆ ತುಪ್ಪ ಬಳಕೆಯ ವಿವಾದ ತೀವ್ರಗೊಂಡಿರುವಾಗಲೇ ತಿರುಪತಿ ದೇವಸ್ಥಾನದಲ್ಲಿ ಮದ್ಯ ಮತ್ತು ಮಾಂಸಾಹಾರದ ಪೂರೈಕೆಯೂ ಆಗಿರಬಹುದೆಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಆರೋಪಿಸುವ ಮೂಲಕ ಇನ್ನೊಂದು ತಿರುವು ಪಡೆದು ಕೊಂಡಿದೆ. ಜನರು ಮಂದಿರದಲ್ಲಿ ಪಾರ್ಟಿಗಳನ್ನು ಮಾಡುತ್ತಿದ್ದರು ಎಂದೂ ಡಿಸಿಎಂ ಆರೋಪಿಸಿ, ಜಗನ್ ಮೋಹನ್ ರೆಡ್ಡಿ ಆಡಳಿತದ ವೇಳೆ ದೇವಸ್ಥಾನದ ಪಾವಿತ್ರ್ಯ ಕುಲಗೆಟ್ಟಿತ್ತು ಎಂದಿದ್ದಾರೆ.
ತಿರುಪತಿ ಲಡ್ಡುದಲ್ಲಿ ಮಾಂಸ ಇತ್ಯಾದಿ ವಸ್ತುಗಳು ಪತ್ತೆಯಾಗಿರುವುದನ್ನು ಲ್ಯಾಬ್ ವರದಿ ಸ್ಪಷ್ಟಪಡಿಸಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಹೇಳಿದ್ದರಲ್ಲಿ ಸತ್ಯ ಇದೆ. ಹಾಗಾಗಿ, ಇದರಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಹಿಂದಿನ ಆಂಧ್ರಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್ನವರ ಹಿಂದು ವಿರೋಧಿ ನೀತಿಯಿಂದ ಈ ರೀತಿ ಆಗುತ್ತಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು. | ಪ್ರಲ್ಹಾದ ಜೋಶಿ ಕೇಂದ್ರ ಸಚಿವ