ಬಸ್ ನಿಲ್ದಾಣದಲ್ಲಿ ‘ಕರೊನಾ’ ಮುನ್ನೆಚ್ಚರಿಕೆ ಕ್ರಮ

2
Published on

ಕೆ.ಆರ್.ನಗರ: ಮೇ 17ರ ನಂತರ ಲಾಕ್‌ಡೌನ್ ತೆರವಾಗುವ ಸಾಧ್ಯತೆ ಇದ್ದು ಬಸ್ ನಿಲ್ದಾಣದಲ್ಲಿ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿ ಮತ್ತು ಅನವಶ್ಯಕವಾಗಿ ವಾಹನಗಳ ಸಂಚಾರ ತಡೆಗಟ್ಟಲು ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಪಾಪನಾಯಕ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಏಕಮುಖ ಸಂಚಾರಕ್ಕಾಗಿ ಬ್ಯಾರಿಕೇಡ್ ಅಳವಡಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, 3ನೇ ಹಂತದ ಲಾಕ್‌ಡೌನ್ ಮುಕ್ತಾಯವಾದ ನಂತರ ಸರ್ಕಾರ ಬಸ್ ಸಂಚಾರಕ್ಕೆ ಅವಕಾಶ ನೀಡಬಹುದು ಎಂಬ ಮುಂದಾ ಲೋಚನೆಯಿಂದ ಮತ್ತು ಪ್ರಯಾಣಿಕರ ಸುರಕ್ಷತೆ ಹಾಗೂ ಕೋವಿಡ್-19 ತಡೆಗಟ್ಟಲು ನಿಲ್ದಾಣದಲ್ಲಿ ಒಂದೇ ದ್ವಾರ ತೆರೆಯಲಾಗುವುದು ಎಂದರು.
ಈಗ ಬಜಾರ್ ರಸ್ತೆಯ ಕಡೆಯಿಂದ ಮತ್ತು ಸಿಎಂ ರಸ್ತೆಯ ಕಡೆಯಿಂದ ಬಸ್ ನಿಲ್ದಾಣಕ್ಕೆ ಪ್ರವೇಶದ್ವಾರಗಳಿವೆ. ಬಜಾರ್ ರಸ್ತೆ ಭಾಗದ ಪ್ರವೇಶ ದ್ವಾರವನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿಸಲಾಗುತ್ತಿದೆ. ಕೇವಲ ಸಿಎಂ ರಸ್ತೆ ಕಡೆಯಿಂದ ಬರುವ ದ್ವಾರದಲ್ಲೇ ಬಸ್‌ಗಳು, ಪ್ರಯಾಣಿಕರು ಒಳಹೋಗಲು ಮತ್ತು ಹೊರಹೋಗಲು ಅವಕಾಶ ಕಲ್ಪಿಸಲಾಗುತ್ತದೆ. ಜನದಟ್ಟಣೆ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಲಾಕ್‌ಡೌನ್ ತೆರವಾಗಿ ಬಸ್ ಸಂಚಾರ ಪ್ರಾರಂಭವಾದರೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಪ್ರವೇಶ ದ್ವಾರದಲ್ಲೆ ಸ್ಕ್ರೀನಿಂಗ್ ಪರೀಕ್ಷೆ ಮಾಡಿದ ನಂತರ ಒಳ ಬಿಡಲಾಗುವುದು. ಎಲ್ಲ ನಿಲ್ದಾಣ ಗಳಲ್ಲೂ ಟೆಸ್ಟಿಂಗ್ ಮಾಡುವುದರಿಂದ ಹೊರಗಿನಿಂದ ಬರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಇರುವುದಿಲ್ಲ ಎಂದರು.
ಸಾರ್ವಜನಿಕರು ಮತ್ತು ಪ್ರಯಾಣಿಕರು ನಿಯಮಗಳನ್ನು ಪಾಲಿಸುವ ಮೂಲಕ ಮಹಾಮಾರಿ ಕರೊನಾದಿಂದ ದೇಶ ಮುಕ್ತವಾಗಲು ಸಹಕರಿಸಿ ಎಂದು ಮನವಿ ಮಾಡಿದರು. ಚಾರ್ಜ್‌ಮನ್‌ಗಳಾದ ರವಿಕುಮಾರ್, ಶ್ರೀಕಾಂತ್, ಮೆಕಾನಿಕ್ ಗೌಸ್‌ಷರೀಫ್, ಚಾಲಕರಾದ ದೇವೆಂದ್ರ, ಕೆ.ಎಸ್.ನಾಗೇಶ್, ಗಣೇಶ್ ಹಾಜರಿದ್ದರು. .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net