

ಆಲ್ದೂರು: ಕಾಫಿ ಮಹಿಳಾ ಪತ್ತಿನ ಸಹಕಾರ ಸಂಘ ಸತತ ಒಂಭತ್ತು ವರ್ಷಗಳಿಂದ ಲಾಭಗಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಮಾದರಿ ಸಂಘವಾಗಿ ಬೆಳೆಸಲಾಗುವುದು ಎಂದು ಕಾಫಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸವಿತಾ ರಮೇಶ್ ಹೇಳಿದರು.
ನಾರಾಯಣ ಗುರು ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಮಹಿಳಾ ಪತ್ತಿನ ಸಹಕಾರ ಸಂಘದ ಒಂಭತ್ತನೆ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಮ್ಮ ಸಂಘ ಪ್ರತಿ ವರ್ಷ ಲಾಭದ ಕಡೆಗೆ ಸಾಗುತ್ತಿದೆ. ಆದರೆ ಸ್ವಂತ ಕಟ್ಟಡ ಹೊಂದಿಲ್ಲ. ಸಂಘಕ್ಕೆ ಸ್ವಂತ ಕಟ್ಟ ನಿರ್ಮಿಸುವ ಮಹತ್ವಾಕಾಂಕ್ಷೆ ಇದೆ. ಅದರೆ ಜಾಗದ ಕೊರತೆಯಿದೆ. ಆಲ್ದೂರು ಗ್ರಾಪಂ ಸಂಘಕ್ಕೆ ನಿವೇಶನ ನೀಡಿದರೆ ಕೆಲವೇ ವರ್ಷಗಳಲ್ಲಿ ನಮ್ಮ ಸಂಘವು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಉಪಾಧ್ಯಕ್ಷೆ ಗೀತಾ ಮಂಜುನಾಥ್ ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯರು ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಆಲ್ದೂರು ಗ್ರಾಮ ಪಂಚಾಯತಿ ಪೌರ ಕಾರ್ಮಿಕರಾದ ನಾಗರತ್ನಮ್ಮ, ಸಾವಿತ್ರಮ್ಮ, ನಾಗಮ್ಮ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ವಿವಿಧ ಆಟೋಟ ಸರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಂಘದ ನಿರ್ದೆಶಕರಾದ ಕಮಲ ಬಸವೇಗೌಡ, ಜಯಾಶೇಖರ್, ಜಯಶೀಲ ಚಿದಂಬರ್, ಸರಳ ಸತೀಶ್ , ರತ್ನಮ್ಮ ಪಾಯಣ್ಣ, ಸಾಧ್ವಿ ಮಧುಸೂಧನ್, ಹಿಮಾ ಸರ್ವರಿ, ಸುಮಾಮೂರ್ತಿ, ಪ್ರತಿಭಾ ನವೀನ್, ಚಂಪ ಜಗದೀಶ್, ಸಿಇಒ ತನುಜ ರಾಜೇಶ್ ಇದ್ದರು.