

ಬೆಂಗಳೂರು: ಅನುದಾನ ಕೊರತೆ ಶಾಸಕರು ಅಸಮಾಧಾನಗೊಳ್ಳುವ ಪರಿಸ್ಥಿತಿ ಇಲ್ಲ(lack of funding no situation where MLAs are upset). ಸಿಎಂ ಮತ್ತು ಡಿಸಿಎಂ ಅಸಮಾಧಾನ ಶಮನಗೊಳಿಸುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ(N Chaluvarayaswamy) ಹೇಳಿದರು.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಹ ಗಂಭೀರ ಸಮಸ್ಯೆ ಏನೂ ಇಲ್ಲ. ಗ್ಯಾರಂಟಿಗಳ ನಡುವೆಯೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇತ್ತೀಚೆಗೆ ಕಾಮಗಾರಿ ವೆಚ್ಚ ವಿಪರೀತ ಹೆಚ್ಚಿರುವುದರಿಂದ ಅನುದಾನದ ಕೊರತೆ ಕಾಡುತ್ತಿದೆ. ಇದನ್ನು ಸಿಎಂ, ಡಿಸಿಎಂ ಸರಿಪಡಿಸುತ್ತಾರೆ ಎಂದು ತಿಳಿಸಿದರು.
ಅಪರೇಷನ್ ಕಮಲ ಪ್ರಯತ್ನ ನಡೆಯುತ್ತಲೇ ಇರುತ್ತದೆ. ವಿಧಾನಸಭೆ ಚುನಾವಣೆ ಆದ ಕೂಡಲೇ ಸರ್ಕಾರ ಎರಡು ತಿಂಗಳೂ ಇರುವುದಿಲ್ಲ ಎಂದವರು ಯಾರು? ಚನ್ನಪಟ್ಟಣ ಚುನಾವಣೆಯಲ್ಲಿ ಸರ್ಕಾರ ತೆಗೆಯುವವರೆಗೆ ಮಲಗುವುದಿಲ್ಲ ಎಂದವರು ಯಾರು? ಬಿ.ಎಸ್.ಯಡಿಯೂರಪ್ಪ ಸಿಎಂ ಆದದ್ದು ಹೇಗೆ ಎಂದು ಪ್ರಶ್ನಿಸಿದರು.
ಒಂದೂವರೆ ವರ್ಷದಿಂದ ಅಪರೇಷನ್ ಕಮಲ ಪ್ರಯತ್ನ ನಡೆಯುತ್ತಲೇ ಇದೆ. ಬಹುಮತ ಇರುವ ಸರ್ಕಾರ ತೆಗೆಯಲು ಯಾವ ಸಂವಿಧಾನ ಹೇಳಿದೆ ಎಂದು ಚಲುವರಾಯಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.