ಕೆಂಚನಕುಪ್ಪೆ ವಾರ್ಡ್‌ನಲ್ಲಿ ಸೌಕರ್ಯ ಕೊರತೆ

Published on

* ಚರಂಡಿ ನೀರಿನಿಂದ ಸಾಂಕ್ರಾಮಿಕ ಭೀತಿ

* ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಗ್ರಹಣ

* ಅಧಿಕಾರಿಗಳೇ ಅಧಿಪತಿಗಳು

ಚೇತನ್ ಚಕ್ಕೆರೆ ಬಿಡದಿ

ಬಿಡದಿ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಕೆಂಚನಕುಪ್ಪೆ ವಾರ್ಡ್ ಹಲವು ಸಮಸ್ಯೆಗಳ ತಾಣವಾಗಿದೆ. ರಸ್ತೆ, ಚರಂಡಿ, ಯುಜಿಡಿ, ಕಸದ ಸಮಸ್ಯೆ ನಡುವೆ ವಾರ್ಡ್ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ.

ಹೌದು. ಬಿಡದಿ ಪುರಸಭೆಯ 4ನೇ ವಾರ್ಡ್‌ನಲ್ಲಿ ಸಾಕಷ್ಟು ಮೂಲ ಸೌಕರ್ಯ ಕೊರತೆ ಕಂಡು ಬರುತ್ತಿದೆ. ಪುರಸಭೆಗೆ ದೊಡ್ಡ ವಾರ್ಡ್ ಎನ್ನಿಸಿಕೊಂಡಿರುವ ಕೆಂಚನಕುಪ್ಪೆ ಗ್ರಾಮದಲ್ಲಿ ಪ್ರಮುಖವಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಚರಂಡಿ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಕೊಳಚೆ ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಯಾಗಿದೆ.

ಪುರಸಭೆಯಿಂದ ವಾರ್ಡ್‌ನಲ್ಲಿ ನಡೆಸುತ್ತಿರುವ ಯುಜಿಡಿ ಕಾಮಗಾರಿಯನ್ನು ಅಲ್ಲಲ್ಲಿ ಹಾಗೆ ಬಿಡಲಾಗಿದೆ. ಇದರಿಂದಾಗಿ ಹಲವು ಮನೆಗಳಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಗುಂಡಿಗಳು ಬಿದ್ದು ವಾಹನಗಳ ಸವಾರರು ಹರಸಹಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಗ್ರಹಣ ಹಿಡಿದಿರುವ ಕಾರಣದಿಂದಾಗಿ ಅಧಿಕಾರಿಗಳೇ ಅಧಿಪತಿಗಳಾಗಿದ್ದು, ಅವರು ಮಾಡಿದ್ದೆ ಕೆಲಸ ಸರಿ ಎನ್ನಬೇಕಾದ ಪರಿಸ್ಥಿತಿ, ಇದರ ಜತೆಗೆ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕತ್ತಲೆಲ್ಲೇ ಸಂಚರಿಸುವಂತಾಗಿದೆ.

ಆಗಬೇಕಿರುವ ಕೆಲಸಗಳು

* ಡಾಂಬರ್ ಹಾಗೂ ಸಿಮೆಂಟ್ ಕಾಣದ ರಸ್ತೆಗಳಿಗೆ ಮುಕ್ತಿ ನೀಡಬೇಕಿದೆ.

* ವಾರ್ಡ್‌ನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಆಗಬೇಕಿದೆ.

* ಬೀದಿಗಳಲ್ಲಿ ವಿದ್ಯುತ್ ಕಂಬಕ್ಕೆ ಲೈಟ್‌ಗಳ ವ್ಯವಸ್ಥೆ ಮಾಡಬೇಕಿದೆ.

* ಅಂಬೇಡ್ಕರ್ ಭವನ ನಿರ್ಮಾಣ ವಾಗಬೇಕಿದೆ.

* ನೆಲ್ಲಿಗುಡ್ಡೆ ಕೆರೆಯಿಂದ ಹಲವು ಹಳ್ಳಿಗಳಿಗೆ ನೀರು ಹರಿಯುವ ಕಾಲುವೆಗೆ ಕಲುಷಿತ ನೀರು ಸೇರುತ್ತಿದ್ದು ಇದರ ಬಗ್ಗೆ ಕ್ರಮ ವಹಿಸಬೇಕಿದೆ.

* ಯುಜಿಡಿ ಕಾಮಗಾರಿ ಪೂರ್ಣ ಗೊಳ್ಳಬೇಕು.

* ಕಾವೇರಿ ನೀರನ್ನು ಕುಡಿಯುವ ಉದ್ದೇಶದಿಂದ ತರುತ್ತಿರುವ ಪೈಪ್‌ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕಿದೆ.

ನಾವು ಚುನಾವಣೆಯಲ್ಲಿ ಜನರಿಂದ ಮತ ಪಡೆದು ಗೆಲುವು ಪಡೆದಿದ್ದೇವೆ ವಿನಃ ಆಡಳಿತಾತ್ಮಕವಾಗಿ ಸದಸ್ಯರಾಗಿಲ್ಲ. ಚುನಾವಣೆ ನಡೆದು 2 ವರ್ಷ ಕಳೆದರೂ ಇದುವರೆಗೂ ನಮಗೆ ಸದಸ್ಯತ್ವ ಭಾಗ್ಯ ಸಿಕ್ಕಿಲ್ಲ, ನಾವು ಪುರಸಭೆಗೆ ಹೋಗಿ ಸಮಸ್ಯೆ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಲು ನಮಗೆ ಅಧಿಕಾರ ಇಲ್ಲ. ಆದಾಗ್ಯೂ ಪುರಸಭೆ ನಿಧಿಯಿಂದ ವಾರ್ಡ್‌ಗೆ ಸಿಗುವ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.

ರಮೇಶ್, ವಾರ್ಡ್ ಸದಸ್ಯ

ಮೊಬೈಲ್ ನಂಬರ್- 9964662889

ಕೆಂಚನಕುಪ್ಪೆ ವಾರ್ಡ್‌ನಲ್ಲಿ  ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿದ್ದಾರೆ. ಆದರೂ ಪುರಸಭೆಯಿಂದ ಆಗಬೇಕಿರುವ ಕೆಲಸಗಳು ಆಗುತ್ತಿಲ್ಲ. ಯುಜಿಡಿ ಕಾಮಗಾರಿ ಮಾಡುವುದಾಗಿ ರಸ್ತೆ ಕಿತ್ತು  ವರ್ಷಗಳೆ ಕಳೆದರೂ ದುರಸ್ತಿ ಮಾಡಿಲ್ಲ. ರಸ್ತೆಯ ಧೂಳು ಮನೆ ಸೇರುತ್ತಿದೆ. ವಿದ್ಯುತ್ ಕಂಬಗಳಲ್ಲಿ ನೋಡಲು ಬಲ್ಪ್ ಇದೆ. ಆದರೆ, ರಾತ್ರಿ ವೇಳೆ ಬೆಳಗುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ಮುಕ್ತಿ ನೀಡಬೇಕಿದೆ.

ರಾಮಣ್ಣ, ಕೆಂಚನಕುಪ್ಪೆ ವಾರ್ಡ್ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net