

ಜೈಪುರ: ಸ್ಮಾರ್ಟ್ಫೋನ್ ಜಮಾನದಲ್ಲಿ ಹೆಚ್ಚಿನವರು ಯೂಟ್ಯೂಬ್ (Youtube) ಹಾಗೂ ಗೂಗಲ್ (Google) ನೋಡಿಕೊಂಡು ಹೊಸ ಹೊಸ ವಿಚಾರಗಳನ್ನು ಕಲಿತುಕೊಂಡು ಅದನ್ನು ಪ್ರಯೋಗಿಸುತ್ತಾರೆ. ಕೆಲವರು ಯೂಟ್ಯೂಬ್ ನೋಡಿಕೊಂಡು ಒಳ್ಳೆಯದನ್ನು ಕಲಿತರೆ ಮತ್ತಷ್ಟು ಜನ ಇಲ್ಲದ ಕೆಲಸಕ್ಕೆ ಕೈ ಹಾಕಿ ಸುದ್ದಿಯಾಗಿದ್ದನ್ನು ನೋಡಿದ್ದೇವೆ. ಈ ವಿಚಾರಗಳು ಸಖತ್ ವೈರಲ್ ಕೂಡ ಆಗಿದೆ. ಇದೀಗ ಅಂತಹದ್ದೆ ಘಟನೆಯೊಂದು ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ಜೋಧ್ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದೀಪಾವಳಿ ಹಬ್ಬದ ನಿಮಿತ ವೈದ್ಯರು ಮತ್ತು ಲ್ಯಾಬ್ ಟೆಕ್ನಿಷಿಯನ್ ರಜೆಯಲ್ಲಿ ಇದ್ದ ಕಾರಣ ಆಸ್ಪತ್ರೆಗೆ ಬಂದ ರೋಗಿಗೆ ಲ್ಯಾಬ್ ಅಟೆಂಡರ್ (Lab Attendant) ಯುಟ್ಯೂಬ್ (Youtube) ನೋಡಿ ಇಸಿಜಿ (ECG) ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಯುಟ್ಯೂಬ್‌ನಲ್ಲಿ ಇಸಿಜಿ ಮಾಡುವುದು ಹೇಗೆ ಎಂಬುದನ್ನು ನೋಡಿ ಲ್ಯಾಬ್ ಅಟೆಂಡರ್ (Lab Attendant) ಪರೀಕ್ಷೆ ಮಾಡಲು ಮುಂದಾಗುತ್ತಿರುವುದನ್ನು ನೋಡಬಹುದಾಗಿದೆ. ರೋಗಿಯ ಕುಟುಂಬಸ್ಥರು ಇದರ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ನೀವು ಸ್ಕ್ಯಾನ್ ಮಾಡಿದರೆ ಅವನ ಪ್ರಾಣಕ್ಕೆ ಕಂಟಕವಾಗಬಹುದು ಎಂದು ಹೇಳಿದರೂ ಲ್ಯಾಬ್ ಟೆಕ್ನಿಷಿಯನ್ (Lab Technician) ದೀಪಾವಳಿ ರಜೆಯ ನಿಮಿತ್ತ ಮನೆಗೆ ಹೋಗಿದ್ದಾರೆ, ಇಸಿಜಿಗೆ ಬೇಕಾದ ಯಂತ್ರಗಳನ್ನು ಸರಿಯಾಗಿ ಅಳವಡಿಸಲಾಗಿದೆ, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿ ಅಟೆಂಡರ್ ರೋಗಿಗೆ ಯುಟ್ಯೂಬ್ ನೋಡಿ ಇಸಿಜಿ ಮಾಡಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಜೋಧ್ಪುರದ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಬಿ.ಎಸ್. ಜೋಧಾ, ಘಟನೆಯ ಬಗ್ಗೆ ತನಿಖೆ ನಡೆಸಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಸಿಜಿ ಪರೀಕ್ಷೆಯು (ECG Test) ಜೀವಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ತಪ್ಪಾದ ಇಸಿಜಿ ಪಾಯಿಂಟ್ ಪ್ಲೇಸ್‌ಮೆಂಟ್ ರೋಗಿಗೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ಆದ್ರೆ ಇದು ತಪ್ಪು ರಿಸಲ್ಟ್ ಅನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.