Cannes - ಕಾನ್ಸ್​ ಚಿತ್ರೋತ್ಸವದಲ್ಲಿ ಕನ್ನಡದ ಕೆವಿಎನ್​ ನಿರ್ಮಾಣದ ಮಲಯಾಳಂ ಸಿನಿಮಾ!

ಕಾನ್ಸ್​ ಫಿಲಂ ಫೆಸ್ಟಿವಲ್​
ಕಾನ್ಸ್​ ಫಿಲಂ ಫೆಸ್ಟಿವಲ್​
Published on
Cannes Film Festival -
ಕಳೆದ ವರ್ಷ ತೆರೆಕಂಡ ಹಿಟ್​ ಮಲಯಾಳಂ ಸಿನಿಮಾ "ಮಂಜುಮ್ಮೆಲ್​ ಬಾಯ್ಸ್​' ಖ್ಯಾತಿಯ ಚಿದಂಬರಂ ನಿರ್ದೇಶನ ಮತ್ತು ವೆಂಕಟ್​ ಕೆ. ನಾರಾಯಣ್​ ಒಡೆತನದ ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ "ಬಾಲನ್​ ದ ಬಾಯ್​'. ಈ ಚಿತ್ರಕ್ಕೆ "ಆವೇಷಂ' ನಿರ್ದೇಶಕ ಜಿತು ಮಾಧವನ್​ ಚಿತ್ರಕಥೆಯಿದ್ದು, ಮಾ. ಚಂದು ಸಲೀಮ್​ ಕುಮಾರ್​ "ಬಾಲನ್​' ಪಾತ್ರದಲ್ಲಿ ನಟಿಸಿದ್ದಾನೆ. ವಿಶೇಷ ಅಂದರೆ ಈ ಚಿತ್ರವಿಗ ಪ್ರತಿಷ್ಠಿತ ಕಾನ್ಸ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದೇ ತಿಂಗಳ 12ರಿಂದ 23ರವರೆಗೆ 79ನೇ ಕಾನ್ಸ್​ ಫಿಲಂ ಫೆಸ್ಟಿವಲ್​ ನಡೆಯಲಿದ್ದು, ಮೇ 14ರಂದು "ಬಾಲನ್​ ದ ಬಾಯ್​' ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಆ ಮೂಲಕ ದೇಶ, ವಿದೇಶಗಳ ನಿರ್ಮಾಪಕರು, ವಿತರಕರು, ಪ್ರದರ್ಶಕರ ಗಮನ ಸೆಳೆದು, ಭಾರತೀಯ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಪ್ಲ್ಯಾನ್​​ ಚಿತ್ರತಂಡದ್ದು. "ಬಾಲನ್​ ದ ಬಾಯ್​' ಚಿತ್ರ ಕಾನ್ಸ್​ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ನಿರ್ದೇಶಕ ಚಿದಂಬರಂ, "ನಾವು ಎಲ್ಲಿಂದ ಬಂದೆವು ಎಂಬ ಹೊರೆಯ ಜತೆಗೆ ನಾವೆಲ್ಲಿಗೆ ಹೋಗಿ ಮುಟ್ಟುತ್ತೇವೆ ಎಂಬ ಹಸಿವನ್ನು ಸಹ ನಮಗೆ ಗೊತ್ತಿಲ್ಲದೇ ನಾವು ಹೊತ್ತಿರುತ್ತೇವೆ. ಈ ಎರಡನ್ನೂ ಅನುಭವಿಸಿದ, ಹೇಳಿಕೊಳ್ಳಲಾಗದೇ, ಉತ್ತರವೂ ಸಿಗದೇ ಪರದಾಡುತ್ತಿರುವ ವ್ಯಕ್ತಿಗಾಗಿ ನಾನು ಈ ಸಿನಿಮಾ ಮಾಡಿದೆ. ಅರ್ಥವಾಗುವ ಮುನ್ನವೇ ಅನುಭವಕ್ಕೆ ಸಿಗುವ ಕಥೆಯಿದು. ಹೀಗಾಗಿಯೇ ಕಾನ್ಸ್​ನಂತಹ ಚಿತ್ರೋತ್ಸವದ ಭಾಗವಾಗಿರುವುದು ಖುಷಿ ನೀಡಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ ನಿರ್ಮಾಪಕ ವೆಂಕಟ್​ ಕೆ. ನಾರಾಯಣ್​, ""ಬಾಲನ್​ ದ ಬಾಯ್​' ಕೇವಲ ಒಂದು ಸಿನಿಮಾ ಅಲ್ಲ. ಇದೊಂದು ಸ್ಟೇಟ್​ಮೆಂಟ್​. ನೀನು ಚಿತ್ರರಂಗಕ್ಕೆ ಏಕೆ ಬಂದೆ ಎಂದು ನೆನಪಿಸುವ ಚಿತ್ರ. ಮಲಯಾಳಂ ಚಿತ್ರರಂಗ ಯಾರೂ ಕಡೆಗಣಿಸಲಾಗದಂತಹ ಚಿತ್ರಗಳನ್ನು ಮಾಡುತ್ತಿದೆ. ಈ ಬಾರಿಯ ಕಾನ್ಸ್​ನಲ್ಲಿ "ಬಾಲನ್​ ದ ಬಾಯ್​' ಚರ್ಚೆಯ ಕೇಂದ್ರಬಿಂದುವಾಗಲಿದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net