ಪದವಿ ಪರೀಕ್ಷೆ ಮುಂದೂಡಿದ ಕುವೆಂಪು ವಿವಿ

kuvempu v v
Published on

ಶಿವಮೊಗ್ಗ: ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಕುವೆಂಪು ವಿವಿ ಮುಂದೂಡಿದೆ. ಈ ಹಿಂದೆ ಸೆ.8ರಿಂದ 22ರವರೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಸೆ.22ರಿಂದ ಅ.10ರವರೆಗೆ ನಡೆಸುವುದಾಗಿ ವಿವಿ ಸುತ್ತೋಲೆ ಹೊರಡಿಸಿದೆ. ತರಾತುರಿಯಲ್ಲಿ ಪರೀಕ್ಷೆ ನಿಗದಿಪಡಿಸಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ‘ವಿಜಯವಾಣಿ’ ಬುಧವಾರ ವರದಿ ಪ್ರಕಟಿಸಿತ್ತು.

ಇನ್ನೊಂದೆಡೆ ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ ಆರಂಭವಾಗಿ ಎರಡು ತಿಂಗಳಿಗೆ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ್ದರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸೆಮಿಸ್ಟರ್‌ನ ಪಠ್ಯದ ಭೋದನೆ ಪೂರ್ಣವಾಗಿಲ್ಲ. ಸೆಮಿಸ್ಟರ್ ಅವಧಿಯ ಪಠ್ಯ ಬೋಧನೆಗೆ ಇನ್ನೂ ಒಂದು ತಿಂಗಳು ಬೇಕು. ಆಗಲೇ ಪರೀಕ್ಷೆ ನಡೆಸುತ್ತಿರುವ ಅವೈಜ್ಞಾನಿಕ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಪಠ್ಯಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದೇ ಇರುವುದರಿಂದ ದಾವಣಗೆರೆ ವಿವಿಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಕುವೆಂಪು ವಿವಿಯೂ ಇದೇ ಮಾದರಿ ಅನುಸರಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ರಾಜ್ಯ ಸರ್ಕಾರ ಏಕರೂಪದ ವೇಳಾಪಟ್ಟಿ ನಿಗದಿಪಡಿಸಿದ್ದರಿಂದ ಗೊಂದಲ ಉಂಟಾಗಿತ್ತು.

ಇನ್ನೊಂದೆಡೆ ಹೆಚ್ಚುವರಿ ತರಗತಿಗಳನ್ನು ನಡೆಸಿ ಪಠ್ಯ ಪೂರೈಸುವಂತೆ ಕುವೆಂಪು ವಿವಿಯಿಂದ ಕಾಲೇಜುಗಳಿಗೆ ಸೂಚಿಸಲಾಗಿತ್ತು. ಆದರೆ ಯಾವುದೇ ಸೆಮಿಸ್ಟರ್ ಪರೀಕ್ಷೆ ನಡೆಸುವ ಮುನ್ನ ಆಂತರಿಕ ಮೌಲ್ಯಮಾಪನದ ಎರಡು ಪರೀಕ್ಷೆಗಳನ್ನು ನಡೆಸಬೇಕು. ಆದರೆ ಒಂದು ಪರೀಕ್ಷೆ ಮಾತ್ರ ನಡೆದಿರುವುದು ತೊಡಕಾಗಿತ್ತು. ಇದೀಗ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆಯಿಂದ ಗೊಂದಲ ದೂರಾದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net