

ಕುಷ್ಟಗಿ: ಸಾವಯವ ಕೃಷಿ ಕೈಗೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡುವ ಕಾರ್ಯವನ್ನು ರೈತರು ಮಾಡಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಮುಂದಿನ ಪೀಳಿಗೆಯ ಆರೋಗ್ಯ ದೃಷ್ಟಿಯಿಂದ ಈಗಿನಿಂದಲೇ ರಾಸಾಯನಿಕ ಬಳಕೆ ಮಾಡುವುದನ್ನು ನಿಲ್ಲಿಸಬೇಕಿದೆ. ಕೃಷಿ ಇಲಾಖೆ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಕೃಷಿ ಇಲಾಖೆ ಉಪನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸುವ ಮೂಲಕ ಉತ್ತಮ ಇಳುವರಿ ಜತೆಗೆ ಆದಾಯ ಕಂಡುಕೊಳ್ಳಬೇಕಿದೆ. ಸಾಂಪ್ರದಾಯಿಕ ಕೃಷಿ ಹಾಗೂ ಕೃಷಿ ವಿಜ್ಞಾನಿಗಳ ಸಲಹೆ ಪಡೆಯದಿರುವುದರಿಂದ ಆದಾಯದ ಬದಲು ಖರ್ಚು ದ್ವಿಗುಣವಾಗುತ್ತಿದೆ ಎಂದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬಿತ್ತನೆ ಬೀಜ ವಿತರಣೆ ಇತರ ಸಂದರ್ಭಗಳಲ್ಲಿ ರೈತರು ಸಿಬ್ಬಂದಿ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆಗಳಿಂದ ಬರುವ ಆದಾಯದಿಂದ ಕೃಷಿ ಚಟುವಟಿಕೆಯ ಖರ್ಚುನ್ನು ಮಾತ್ರ ನಿಭಾಯಿಸಬಹುದು. ಹಿಂಗಾರು ಬೆಳೆಗಳು ಆದಾಯ ತಂದುಕೊಡುತ್ತವೆ. ಮಳೆ ನೀರು ಸಂಗ್ರಹಿಸುವುದರ ಜತೆಗೆ ವೈಜ್ಞಾನಿಕ ಬೇಸಾಯ ಮಾಡಿ ನಿರೀಕ್ಷಿತ ಆದಾಯ ಕಂಡುಕೊಳ್ಳುವಂತೆ ತಿಳಿಸಿದರು. ಸಹಾಯಕ ನಿರ್ದೇಶಕ ಅಜ್ಮೀರ್ ಅಲಿ, ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್‌ಸಾಬ್ ಮೂಲಿಮನಿ ಇದ್ದರು.
ಕೃಷಿ ಪರಿಕರ ಸೇರಿದಂತೆ ಯಾವುದೇ ಯೋಜನೆಯಡಿ ಅರ್ಜಿ ಸಲ್ಲಿಸಿದರೂ ಅನುದಾನ ಇಲ್ಲವೆಂದು ಅಧಿಕಾರಿಗಳು ಸಾಗಹಾಕುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅರ್ಜಿ ಸಲ್ಲಿಸುತ್ತ ಬಂದರೂ ಯಾವೊಂದೂ ಯೋಜನೆಯ ಲಾಭ ಪಡೆದಿಲ್ಲ. ಇದರಿಂದ ಸಾಮಾನ್ಯ ವರ್ಗದ ರೈತರ ಕೈಕಾಲು ಹಿಡಿದು ಅವರ ಮೂಲಕ ಯೋಜನೆಗಳ ಲಾಭ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪರಿಶಿಷ್ಟ ವರ್ಗ ಹಾಗೂ ಪಂಗಡಕ್ಕೆ ಸೇರಿದ ರೈತರು ಶಾಸಕ ದೊಡ್ಡನಗೌಡ ಪಾಟೀಲ್ ಎದುರು ಆಕ್ರೋಶ ವ್ಯಕ್ತಪಡಿಸಿದರು. ಬಿತ್ತನೆ ಬೀಜ ವಿತರಣೆಯ ಮೊದಲ ದಿನವೇ ತಾಲೂಕಿನ ವಿವಿಧ ಗ್ರಾಮಗಳ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಮುಗಿ ಬಿದ್ದಿದ್ದು ಕಂಡುಬಂತು. ಈ ವೇಳೆ ಸರದಿಯಲ್ಲಿ ನಿಂತ ರೈತರ ಮಧ್ಯೆ ನೂಕುನುಗ್ಗಲು ಉಂಟಾಗಿ ಪರಸ್ಪರ ವಾಗ್ವಾದಕ್ಕಿಳಿದರು.