

ಕುರುಗೋಡು: ಸಾಧನೆಗೆ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು. ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಓದು ಬುದ್ಧಿಮಟ್ಟ ಹೆಚ್ಚಿಸದರೆ ಆಟ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ನಿತ್ಯ ದೈಹಿಕ ಕಸರತ್ತು ನಡೆಸಿದಾಗ ಮಾತ್ರ ಶರೀರ ಸದೃಢವಾಗುತ್ತದೆ ಎಂದರು.
ಮಕ್ಕಳು ಹಾಗೂ ಶಾಲೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ತಾಲೂಕಿನಲ್ಲಿ ಬಸ್ ಡಿಪೋ ಇದ್ದರೂ ಬಸ್ ಕೊರತೆ ಇದೆ. ದಿನ ಬೆಳಗಾದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಫೋನ್ ಮಾಡುತ್ತಾರೆ ಅಳಲು ತೋಡಿಕೊಳ್ಳುತ್ತಾರೆ. ಅಗತ್ಯ ಬಸ್ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.
ದೈಹಿಕ ಶಿಕ್ಷಣಾಧಿಕಾರಿ ವೀರನಗೌಡ ಮಾತನಾಡಿ, ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. 30ಕ್ಕೂ ಹೆಚ್ಚು ಶಾಲೆಗಳಲ್ಲಿ ಕೇವಲ 11 ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಶಾಸಕರು ಈ ಬಗ್ಗೆ ಹೆಚ್ಚಿನ ಗಮನವರಿಸಿ ಸರ್ಕಾರದ ಗಮನಕ್ಕೆ ತರಬೇಕು. ಡಿಎಂಎಫ್ ಅನುದಾನದಲ್ಲಿ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಕೊಳ್ಳಲು ಡಿಸಿ ಜತೆ ಮಾತನಾಡಬೇಕು ಎಂದು ಕೋರಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ, ಪ್ರಮುಖರಾದ ನಿಂಗಪ್ಪ, ತುಕಾರಾಮ್ ಗೊರವ, ಕೆ.ಮಾರೆಣ್ಣ, ನಾಗಭೂಷಣ, ಶಿವಶಂಕರ್, ಟಿ.ಸಿದ್ದಪ್ಪ, ಚಾನಾಳ್ ಆನಂದ, ಮೃತ್ಯುಂಜಯ, ಎಸ್ಡಿಎಂಸಿ ಅಧ್ಯಕ್ಷ ರಾಜಶೇಖರ ಇತರರಿದ್ದರು.