More

    ಉಪ್ಪಾರಹಳ್ಳಿಯಲ್ಲಿ ಶೀಘ್ರ ಮೊಬೈಲ್ ಟವರ್- ಶಾಸಕ ಜೆ.ಎನ್.ಗಣೇಶ್ ಹೇಳಿಕೆ

    ಕಂಪ್ಲಿ: ಉಪ್ಪಾರಹಳ್ಳಿ ಗ್ರಾಮಕ್ಕೆ ಖಾಸಗಿ ಮೊಬೈಲ್ ಟವರ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಂಡಿದ್ದು, ಶೀಘ್ರ ಗ್ರಾಮಕ್ಕೆ ಮೊಬೈಲ್ ಟವರ್ ಸೇವೆ ದೊರೆಯಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ಧಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ 13.90 ಲಕ್ಷ ರೂ.ಗಳ ವೆಚ್ಚದಲ್ಲಿ ಕೊಠಡಿ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮೊಬೈಲ್ ಟವರ್ ಸ್ಥಾಪನೆಗೆ ಖಾಸಗಿ ಕಂಪನಿ ಸಮೀಕ್ಷೆಗೆ ಗ್ರಾಮಕ್ಕೆ ಆಗಮಿಸಲಿದೆ ಎಂದರು.

    ಬಹುವರ್ಷಗಳ ಮೊಬೈಲ್ ಟವರ್ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದ್ದು ಆನ್‌ಲೈನ್ ಸೇವೆಯೊಂದಿಗೆ ಅಂತರ್ಜಾಲ ಆಧಾರಿತ ಸೇವೆಗಳು ಗ್ರಾಮದ ಜನತೆಗೆ ಲಭ್ಯವಾಗಲಿವೆ. ಕ್ಷೇತ್ರಕ್ಕೆ 50 ಬಸ್‌ಗಳ ಬಿಡುವಂತೆ ಸಾರಿಗೆ ಸಚಿವರಲ್ಲಿ ಪ್ರಸ್ತಾಪಿಸಿದ್ದು, ಡಿಎಂಎಫ್ ಅನುದಾನದಡಿ ಕೇವಲ ಮೂರು ಬಸ್‌ಗಳು ದೊರೆತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರ ಅನುಕೂಲಕ್ಕೆ ಕನಿಷ್ಠ 50 ಬಸ್ ಒದಗಿಸುವಲ್ಲಿ ಸಾರಿಗೆ ಸಚಿವರು ಮುಂದಾಗಬೇಕೆಂದು ಒತ್ತಾಯಿಸಿದರು.

    ಮನವಿ: ಶಾಲೆಯ ಶಿಥಿಲಗೊಂಡ ಮೂರು ಕೊಠಡಿಗಳನ್ನು ತೆರವುಗೊಳಿಸಿ ಆರು ಕೊಠಡಿ ನಿರ್ಮಿಸುವಂತೆ, ಶಾಲೆ ಪಕ್ಕದಲ್ಲಿನ ಪ್ರಾಥಮಿಕ ಆರೋಗ್ಯ ಉಪಕೇಂದ್ರವನ್ನು ಸ್ಥಳಾಂತರಿಸುವಂತೆ ಎಸ್ಡಿಎಂಸಿ ಅಧ್ಯಕ್ಷ ಎಚ್.ಜಗದೀಶ್ ಶಾಸಕರಿಗೆ ಮನವಿ ಸಲ್ಲಿಸಿದರು. ತಾಲೂಕಿನ ನಾನಾ ಕಡೆಗಳಲ್ಲಿ 4.29ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಜೆಜೆಎಂ ಯೋಜನೆಯಡಿ ನಲ್ಲಿ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಲಾಯಿತು.

    ಗ್ರಾಪಂ ಸದಸ್ಯರಾದ ನೇಣ್ಕಿ ಗಿರಿ, ಎಚ್.ಕುಮಾರಸ್ವಾಮಿ, ಬ್ಲಾಕ್ ಜಡೆಪ್ಪ, ಪ್ರಮುಖರಾದ ರುದ್ರಮುನಿಸ್ವಾಮಿ, ದೊಡ್ಡಯರ‌್ರಿಸ್ವಾಮಿ, ರಕ್ಕಪ್ಪ, ವೀರೇಶ್, ಪಕ್ಕಿರಯ್ಯ, ಹನುಮಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts