ಸುಟ್ಟು ಕರಕಲಾದ ಬಸ್​ ಮೇಲಿವೆ 16 ಚಲನ್​! ದುರಂತ ಬೆನ್ನಲ್ಲೇ ಶಾಕಿಂಗ್ ವಿಚಾರಗಳು ಬಯಲಿಗೆ | Kurnool Bus Accident

almonds (3)
Published on

Kurnool Bus Accident: ಇಂದು (ಅ.24) ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಎಸಿ ಕೋಚ್​​ನ ಬಸ್​ನಲ್ಲಿ ದಿಢೀರ್​ ಅಗ್ನಿ ಹೊತ್ತಿಕೊಂಡ ಕಾರಣ ದುರಂತದಲ್ಲಿ 19 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಇನ್ನುಳಿದ 22 ಮಂದಿ ಅದೃಷ್ಟವಶಾತ್​ ಪ್ರಾಣಪಾಯದಿಂದ ಪಾರಾಗಿದ್ದಾರೆ.

16 ಚಲನ್​, ಹಲವು ಬಾರಿ ರೂಲ್ಸ್ ಬ್ರೇಕ್​!

ಇಲ್ಲಿಯವರೆಗೆ, ವಿಧಿವಿಜ್ಞಾನ ತಂಡವು ಬಸ್​ನಿಂದ 19 ಮೃತದೇಹಗಳನ್ನು ಹೊರತೆಗೆದಿದೆ. ಶವಗಳನ್ನು ಡಿಎನ್ಎ ಪರೀಕ್ಷೆಗಳ ಮೂಲಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಸಂದರ್ಭದಲ್ಲಿ, ಅಪಘಾತಕ್ಕೀಡಾದ ಬಸ್​ ಸ್ಥಿತಿ ಮತ್ತು ಬಸ್​ ಮೇಲಿರುವ ಚಲನ್​ಗಳ ಬಗ್ಗೆ ಇದೀಗ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಅಪಘಾತಕ್ಕೀಡಾದ ಬಸ್ ಮೇಲೆ ಹಲವು ಟ್ರಾಫಿಕ್​ ದಂಡಗಳು ಬಾಕಿ ಉಳಿದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಜನವರಿ 2024ರಿಂದ ಒಟ್ಟು 23,120 ರೂ. ದಂಡಗಳು ಬಾಕಿ ಇವೆ ಎನ್ನಲಾಗಿದೆ. ಕಳೆದ ವರ್ಷ ಜನವರಿ 27ರಿಂದ ಈ ವರ್ಷ ಅಕ್ಟೋಬರ್ 9ರವರೆಗೆ ಬಸ್ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ. 9 ಬಾರಿ ಪ್ರವೇಶ ನಿಷೇಧಿತ ವಲಯಗಳನ್ನು ಪ್ರವೇಶಿಸಿದ್ದಕ್ಕಾಗಿ ಮತ್ತು ಅತಿ ವೇಗ ಹಾಗೂ ಅಪಾಯಕಾರಿ ಚಾಲನೆ ಮಾಡಿದ್ದಕ್ಕಾಗಿ ಈ ದಂಡಗಳನ್ನು ವಿಧಿಸಲಾಗಿದೆ.

ಫಿಟ್‌ನೆಸ್ ಅವಧಿ, ವಿಮೆ....

ಅಪಘಾತಕ್ಕೀಡಾದ ಬಸ್ DD01 N9490 ಸಂಖ್ಯೆಯೊಂದಿಗೆ ರಿಜಿಸ್ಟರ್​ ಆಗಿದೆ ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ದುರಂತಕ್ಕೆ ತುತ್ತಾದ ಬಸ್‌ನ ಫಿಟ್‌ನೆಸ್ ಅವಧಿ ಮುಗಿದಿದ್ದು, ಕಳೆದ ವರ್ಷ ಇನ್ಶೂರೆನ್ಸ್ ಪಾಲಿಸಿ ಮತ್ತು ತೆರಿಗೆ ಅವಧಿ ಕೂಡ ಮುಗಿದು ಹೋಗಿದೆ ಎಂಬ ಅಚ್ಚರಿ ಸಂಗತಿಗಳು ಹೊರಬಿದ್ದಿವೆ. ಇದರೊಂದಿಗೆ ಮಾಲಿನ್ಯ ಮಾನ್ಯತೆಯೂ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಅತ್ತ ಬಸ್​ ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದ್ದು, ಇಷ್ಟೊಂದು ದಂಡಗಳು ಬಸ್​ ಮೇಲಿದ್ದರೂ ಅಧಿಕಾರಿಗಳು ಇಲ್ಲಿಯವರೆಗೆ ಏನು ಮಾಡುತ್ತಿದ್ದರು ಎಂಬ ಟೀಕೆಗಳು ಮತ್ತೊಂದೆಡೆ. ಆಂಧ್ರಪ್ರದೇಶ ಸಾರಿಗೆ ಇಲಾಖೆ ಅಧಿಕಾರಿಗಳು ಈ ಅಪಘಾತವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತನಿಖಾ ವರದಿಯ ಪ್ರಕಾರ, ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಸಚಿವರ ಖಡಕ್ ಎಚ್ಚರಿಕೆ

ಘಟನೆ ಬೆನ್ನಲ್ಲೇ ಮಾತನಾಡಿರುವ ತೆಲಂಗಾಣ ಸಾರಿಗೆ ಸಚಿವ ಪೊನ್ನಮ್ ಪ್ರಭಾಕರ್, "ಕರ್ನೂಲ್‌ನಲ್ಲಿ ನಡೆದ ಬಸ್ ಘಟನೆ ದುರದೃಷ್ಟಕರ. ಇದು ತುಂಬಾ ದುಃಖಕರ ಸಂಗತಿ. ಮೃತರಿಗೆ ಸಂತಾಪ. ಬಸ್ ಅಪಘಾತದ ವಿವರಗಳ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದೇನೆ. ತೆಲಂಗಾಣ ಸರ್ಕಾರದಿಂದ ತೆಗೆದುಕೊಳ್ಳಬೇಕಾದ ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದರು.

"ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಜಿಲ್ಲೆಗಳ ನಡುವೆ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ನಾವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಶೀಘ್ರದಲ್ಲೇ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಸಾರಿಗೆ ಸಚಿವರು ಮತ್ತು ಸಾರಿಗೆ ಆಯುಕ್ತರ ಸಭೆಯನ್ನು ಕರೆಯುತ್ತೇವೆ. ವೇಗದ ಮಿತಿಗಳಿಂದ ಸಂಭವಿಸುವ ಅಪಘಾತಗಳನ್ನು ತಡೆಯಲು ನಿಯಮ ರೂಪಿಸುತ್ತೇವೆ. ಬಸ್ ಫಿಟ್‌ನೆಸ್, ವಿಮೆ ಮತ್ತು ಇತರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ಅವರನ್ನು ಕೊಲೆ ಆರೋಪದಡಿಯಲ್ಲಿ ಜೈಲಿಗೆ ಕಳುಹಿಸಲಾಗುವುದು" ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net