

ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಬಣ ರಾಜಕೀಯ ಗೋಚರಿಸಿದೆ. ಪ್ಲೆಕ್ಸ್ ಕಟ್ಟುವ ವಿಚಾರಕ್ಕೆ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಹಾಗೂ ರಾಜೇಶ್ ಗೌಡ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ.
ಕುಣಿಗಲ್ ಪಟ್ಟಣದಲ್ಲಿ ನಾಳೆ(ಡಿ.7) ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಮುನ್ನಾ ದಿನವಾದ ಇಂದು(ಮಂಗಳವಾರ) ಕೊತ್ತಗೆರೆಯಲ್ಲಿ ಪ್ಲೆಕ್ಸ್ ರಾಜೇಶ್ಗೌಡರ ಬೆಂಬಲಿಗರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಸೇರಿದಂತೆ ಕುಣಿಗಲ್ಗೆ ಆಗಮಿಸುವ ಬಿಜೆಪಿ ನಾಯಕರಿಗೆ ಸ್ವಾಗತ ಕೋರುವ ಪ್ಲೆಕ್ಸ್ಗಳನ್ನು ಕಟ್ಟುತ್ತಿದ್ದರು. ಈ ವೇಳೆ ಕೃಷ್ಣಕುಮಾರ್ರ ಬೆಂಬಲಿಗರು ಅಡ್ಡಿ ಪಡಿಸಿದ್ದು, ಎರಡೂ ಬಣದ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಡಿ.ಕೃಷ್ಣಕುಮಾರ್ ಹಾಗೂ ರಾಜೇಶ್ ಗೌಡ ಬೆಂಬಲಿಗರು ನಡುರಸ್ತೆಯಲ್ಲೇ ಕಿತ್ತಾಡುತ್ತಿದ್ದ ಪರಿಣಾಮ ಕುಣಿಗಲ್ ಮತ್ತು ತುಮಕೂರು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮೈಲಿ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು.
ಇತ್ತೀಚಿಗೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಮುಂಭರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಯಾರಿಗೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುದ್ದಹನುಮೇಗೌಡ, ಡಿ.ಕೃಷ್ಣಕುಮಾರ್ ಮತ್ತು ರಾಜೇಶ್ಗೌಡ ಮೂವರೂ ಟಿಕೆಟ್ ಆಕಾಂಕ್ಷಿಗಳು.