ನೋಡ ನೋಡುತ್ತಿದ್ದಂತೆಯೇ ಹೇರಿಕುದ್ರು ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ: ನದಿಯಲ್ಲಿ ಶವ ಪತ್ತೆ

KUNDAPUra
Published on

ಕುಂದಾಪುರ: ಜನರು ನೋಡ ನೋಡುತ್ತಿದ್ದಂತೆಯೇ ವ್ಯಕ್ತಿಯೊಬ್ಬ ನದಿಗೆ ಹಾರಿ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ – ಹೇರಿಕುದ್ರು ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೂಡಲೇ ನದಿಯಲ್ಲಿ ದೋಣಿಯಲ್ಲಿ ಮೀನು ಹಿಡಿಯುತ್ತಿದ್ದ ಎರಡು ಮೂರು ದೋಣಿಯವರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ನಿನ್ನೆ ರಾತ್ರಿಯವರೆಗೂ ಶೋಧ ನಡೆಸಿದರು ಪತ್ತೆಯಾಗಿರಲಿಲ್ಲ. ಸೋಮವಾರ ಮೃತ ದೇಹ ಪತ್ತೆಯಾಗಿದೆ.

ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆ ನಿವಾಸಿ, ಕೆ.ಜಿ.ಗಣೇಶ್‌ (50) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಮುಂಬೈಯಲ್ಲಿ ಹಲವು ವರ್ಷಗಳಿಂದ ಹೊಟೇಲ್‌ ಉದ್ಯಮ ನಡೆಸುತ್ತಿದ್ದರು.

ಪ್ರತ್ಯಕ್ಷದರ್ಶಿ ಜನರು ಹೇಳುವ ಪ್ರಕಾರ, ಕುಂದಾಪುರ ಕಡೆಯಿಂದ ರಿಕ್ಷಾದಲ್ಲಿ ಬಂದಿದ್ದ ಅವರು, ಸೇತುವೆಯಿಂದ ಸ್ವಲ್ಪ ದೂರು ಇಳಿದಿದ್ದರು. ಬಳಿಕ ಸೇತುವೆವರೆಗೆ ನಡೆದುಕೊಂಡು ಬಂದು, ಪರ್ಸ್‌, ವಾಚ್‌, ಕನ್ನಡಕ, ಚಪ್ಪಲಿ ಮುಂತಾದ ವಸ್ತುಗಳನ್ನು ತೆಗೆದಿರಿಸಿ ನದಿಗೆ ಹಾರಿದ್ದರು ಎಂದು ತಿಳಿಸಿದ್ದಾರೆ.

ಪರ್ಸ್‌ನಲ್ಲಿದ್ದ ಆಧಾರ್‌ ಕಾರ್ಡ್​ನಿಂದಾಗಿ ಅವರ ಗುರುತು ಪತ್ತೆ ಹಚ್ಚಲಾಗಿದೆ. ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ.ಎನ್‌. ಮೊಗೇರ ನೇತೃತ್ವದಲ್ಲಿ ರಾತ್ರಿಯವರೆಗೂ ಪತ್ತೆ ಕಾರ್ಯ ನಡೆಯಿತು. ಸ್ಥಳೀಯರು ಕೂಡ ಸಹಕರಿಸಿದ್ದರು.

ಸುಮಾರು 25 ವರ್ಷಗಳಿಂದ ಮುಂಬೈಯಲ್ಲಿ ಹೊಟೇಲ್‌ ಉದ್ಯಮಿಯಾಗಿದ್ದ ಗಣೇಶ್‌, 4-5 ವರ್ಷಗಳ ಹಿಂದಷ್ಟೇ ಊರಿಗೆ ಮರಳಿದ್ದರು. ಅಲ್ಲಿದ್ದ ಹೊಟೇಲ್​ನ್ನು ಲೀಸ್‌ಗೆ ಕೊಟ್ಟಿದ್ದರು. ಊರಲ್ಲಿಯೂ ಬಾಡಿಗೆಗೆ ರೂಂಗಳನ್ನು ನೀಡಿದ್ದರು. ಆರ್ಥಿಕವಾಗಿ ಅನುಕೂಲಸ್ಥರಾಗಿದ್ದರು.

ಕಳೆದ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಅವರು ”ನಾನು ಒಂದಲ್ಲ ಒಂದು ದಿನ ಸತ್ತೇ ಸಾಯುತ್ತೇನೆ” ಎನ್ನುತ್ತಿದ್ದರು ಎಂದು ಅವರ ಮಿತ್ರರು ತಿಳಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net