ಚೊಚ್ಚಲ ಅಂತಾರಾಷ್ಟ್ರೀಯ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ ಬಾಲಿವುಡ್ ನಿರ್ದೇಶಕ ಕುನಾಲ್ ಕೊಹ್ಲಿ

ಕುನಾಲ್ ಕೊಹ್ಲಿ ಜತೆ  ನಟಿ ಅಮೀಲಿಯಾ ಗೆಥಿಂಗ್, ನಟ ನಿಕ್ ಸಾಗರ್
ಕುನಾಲ್ ಕೊಹ್ಲಿ ಜತೆ ನಟಿ ಅಮೀಲಿಯಾ ಗೆಥಿಂಗ್, ನಟ ನಿಕ್ ಸಾಗರ್
Published on

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯಲು ಮುಂದಾದ ಬಾಲಿವುಡ್ ನಿರ್ದೇಶಕ
  • ಆಲ್ ಅಬೌಟ್ ಹರ್’ ಚಿತ್ರದ ಮೂಲಕ ಇಂಟರ್ ನ್ಯಾಷನಲ್ ಸಿನಿ ರಂಗಕ್ಕೆ ಡೆಬ್ಯೂ
  • ಶೇಖರ್ ಕಪೂರ್ ಸ್ಪೂರ್ತಿ ಎಂದ ಕುನಾಲ್ ಕೊಹ್ಲಿ
ಬಾಲಿವುಡ್‌ನ ಹಲವು ನಟ-ನಟಿಯರು, ನಿರ್ದೇಶಕರು ಈಗಾಗಲೇ ಹಾಲಿವುಡ್ ಸೇರಿ ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ಮಿಂಚಿದ್ದಾರೆ. ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಿರ್ದೇಶಕರಾದ ಶೇಖರ್ ಕಪೂರ್, ವಿದು ವಿನೋದ್ ಚೋಪ್ರಾ, ದೀಪಾ ಮೆಹ್ತಾ ಹೀಗೆ ಕೆಲವರು ಇಂಟರ್‌ನ್ಯಾಷನಲ್ ಫಿಲಂಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ನಿರ್ದೇಶಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದಾರೆ. ಅವರೇ ಕುನಾಲ್ ಕೊಹ್ಲಿ. ಹಿಂದಿಯ ‘ಹಮ್ ತುಮ್’, ‘ನಾ’, ‘ತೇರಿ ಮೇರಿ ಕಹಾನಿ’ ಸೇರಿ 10ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಕುನಾಲ್ ಕೊಹ್ಲಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ಅಂತಾರಾಷ್ಟ್ರೀಯ ಚಿತ್ರ ‘ಆಲ್ ಅಬೌಟ್ ಹರ್’ ಇಂಗ್ಲೀಷ್ ಭಾಷೆಯಲ್ಲಿ ತೆರೆಕಾಣಲಿದೆ. ‘ದ ಪ್ರಿನ್ಸಸ್ ಸ್ವಿಚ್’ ಖ್ಯಾತಿಯ ಹಾಲಿವುಡ್ ನಟ ನಿಕ್ ಸಾಗರ್ ಮತ್ತು ಬ್ರಿಟಿಷ್ ನಟಿ ಅಮೀಲಿಯಾ ಗೆಥಿಂಗ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಆಲ್ ಅಬೌಟ್ ಹರ್’ ಸೈಕಲಾಜಿಕಲ್ ಡ್ರಾಮಾ ಜತೆಗೆ ಲವ್‌ಸ್ಟೋರಿಯಾಗಿದ್ದು, ಇತ್ತೀಚೆಗೆ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಸದ್ಯ ಶೂಟಿಂಗ್ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದ ಬಗ್ಗೆ ಕುನಾಲ್ ಕೊಹ್ಲಿ, ‘ಅಂತಾರಾಷ್ಟ್ರೀಯ ಸಿನಿಮಾ ನಿರ್ದೇಶಿಸಲು ನನಗೆ ಶೇಖರ್ ಕಪೂರ್ ಸ್ಫೂರ್ತಿ. ನನ್ನಿಂದ ಮತ್ತಷ್ಟು ಭಾರತದ ನಿರ್ದೇಶಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಉತ್ಸಾಹ ವಹಿಸಲಿದ್ದಾರೆ ಎಂಬ ಭರವಸೆಯಿದೆ. ಇಂಗ್ಲಿಷ್ ನನ್ನ ಮಾತೃಭಾಷೆ ಅಲ್ಲದಿದ್ದರೂ, ಇಂಗ್ಲಿಷ್ ಸಿನಿಮಾ ನಿರ್ದೇಶಿಸುವುದು ರೋಮಾಂಚಕ ಅನುಭವ ನೀಡಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net