

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಿಡಿಯನ್ ಕುಣಾಲ್ ಕಾಮ್ರಾ(Kunal Kamra Controversy) ಅವರು ತೊಂದರೆಗೆ ಸಿಲುಕಿದ್ದಾರೆ. ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಮುಂಬೈನ ಖಾರ್ ಪೊಲೀಸ್ ಠಾಣೆ ಈಗ ಕುನಾಲ್ ಕಮ್ರಾಗೆ ಎರಡನೇ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಕೇಳಿದೆ.
ಖಾರ್ ಪೊಲೀಸರು ಈ ಹಿಂದೆ ಕುಣಾಲ್ ಕಾಮ್ರಾ ಅವರಿಗೆ ಸಮನ್ಸ್ ಕಳುಹಿಸಿದ್ದು, ಮಂಗಳವಾರ(ಮಾರ್ಚ್ 25) ಬೆಳಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಕೇಳಿಕೊಂಡಿದ್ದರು. ಆದರೆ ಕುಣಾಲ್ ಕಾಮ್ರಾ ಹಾಜರಾಗಲಿಲ್ಲ ಮತ್ತು ಅವರು ಹಾಜರಾಗಲು ಒಂದು ವಾರದ ಸಮಯ ಕೇಳಿದರು. ಆದರೆ ಪೊಲೀಸರು ಕಮ್ರಾ ಅವರ ಬೇಡಿಕೆಯನ್ನು ತಿರಸ್ಕರಿಸಿದರು.
ಪ್ರಸ್ತುತ, ಮುಂಬೈನ ಖಾರ್ ಪೊಲೀಸರು ದಿ ಹ್ಯಾಬಿಟ್ಯಾಟ್ ಸ್ಟುಡಿಯೋಗೆ ಸಂಬಂಧಿಸಿದ ಜನರು, ಸಿಬ್ಬಂದಿ ಮತ್ತು ಅಲ್ಲಿರುವ ಜನರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಇದೇ ಸ್ಟುಡಿಯೋದಲ್ಲಿ ಕುಣಾಲ್ ಕಾಮ್ರಾ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಮತ್ತು ಆ ವಿಡಿಯೋ ವೈರಲ್ ಆದ ಬಳಿಕ ಶಿವಸೇನಾ ಕಾರ್ಯಕರ್ತರು ದಿ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ಸಾಕಷ್ಟು ಧ್ವಂಸ ಮಾಡಿದರು. ಈ ಬಗ್ಗೆ ಪೊಲೀಸರು ಅನೇಕ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕುಣಾಲ್ ಕಾಮ್ರಾ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ವಿಡಿಯೋವೊಂದರಲ್ಲಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು 'ದೇಶದ್ರೋಹಿ' ಎಂದು ಕರೆದಿದ್ದಾರೆ. ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಶಿವಸೇನಾ ಕಾರ್ಯಕರ್ತರು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ವಿವಾದ ಭುಗಿಲೆದ್ದ ಬಳಿಕ ಕುಣಾಲ್ ಕಾಮ್ರಾ ಅವರು ನಾನು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಕ್ಷಮೆಯಾಚಿಸುವುದಿಲ್ಲ. ನಾನು ಈ ಜನರಿಗೆ ಹೆದರುವುದಿಲ್ಲ ಮತ್ತು ನನ್ನ ಹಾಸಿಗೆಯ ಕೆಳಗೆ ಅಡಗಿಕೊಂಡು ಅದು ಶಾಂತವಾಗುವವರೆಗೆ ಕಾಯುವುದಿಲ್ಲ. ಮೊದಲ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಬಗ್ಗೆ ಹೇಳಿದ್ದನ್ನು ನಾನು ನಿಖರವಾಗಿ ಹೇಳಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)