

ಮುಂಬೈ: ದೇಶದಲ್ಲಿ ಹಾಸ್ಯನಟರು ನಿರಂತರವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಭಾರತದ ಗಾಟ್ ಲ್ಯಾಟೆಂಟ್ ಅನ್ನು ಸ್ಥಗಿತಗೊಳಿಸಲಾಯಿತು. ಈ ಪ್ರಕರಣದಲ್ಲಿ ರಣವೀರ್ ಅಲ್ಲಾಬಾಡಿಯಾ ಮತ್ತು ಹಾಸ್ಯನಟ ಸಮಯ್ ರೈನಾ ಸಂಕಷ್ಟಕ್ಕೆ ಸಿಲುಕಿದರು. ಈ ಬಾರಿ ಕಾನೂನಿನ ಹಿಡಿತ ಹಾಸ್ಯನಟ ಕುಣಾಲ್ ಕಾಮ್ರಾ ಅವರ ಮೇಲಿದೆ. ಕುಣಾಲ್ ಕಾಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಕಾಮೆಂಟ್ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಾಮ್ರಾ ಒಂದು ಹಾಡಿನ ಮೂಲಕ ಪರೋಕ್ಷವಾಗಿ ಶಿಂಧೆ ಅವರನ್ನು ಟೀಕಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಸೋಮವಾರ(ಮಾರ್ಚ್ 24) ಪ್ರತಿಕ್ರಿಯಿಸಿದ್ದಾರೆ.
ದೇಶದ್ರೋಹಿಯನ್ನು ಗದ್ದರ್ ಎಂದು ಕರೆಯುವುದು ತಪ್ಪಲ್ಲ. ಕುಣಾಲ್ ಕಾಮ್ರಾ ಯಾವುದೇ ತಪ್ಪು ಹೇಳಿದ್ದಾರೆಂದು ನಾನು ಭಾವಿಸುವುದಿಲ್ಲ. 'ಗದ್ದಾರ್', 'ಗದ್ದಾರ್' ಎಂದು ಕರೆಯುವುದು ಯಾರ ಮೇಲೂ ಹಲ್ಲೆ ಮಾಡಿದಂತಲ್ಲ.ಕುಣಾಲ್ ಕಾಮ್ರಾ ಅವರ ಕಾರ್ಯಕ್ರಮದ ಪೂರ್ಣ ಹಾಡನ್ನು ಕೇಳಿ ಮತ್ತು ಇತರರಿಗೂ ಅದನ್ನು ಕೇಳುವಂತೆ ಮಾಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದೇ ಸಮಯದಲ್ಲಿ ಮುಂಬೈನ ಖಾರ್ ಪ್ರದೇಶದ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಸ್ಟುಡಿಯೋ ಧ್ವಂಸಕ್ಕೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಾಳಿಗೂ ಶಿವಸೇನೆಗೂ ಯಾವುದೇ ಸಂಬಂಧವಿಲ್ಲ, ಇದನ್ನು ಗದ್ದಾರ್ ಸೇನೆ ಮಾಡಿದೆ. ರಕ್ತದಲ್ಲಿ ಗದ್ದಾರಿ ಇರುವವರು ಎಂದಿಗೂ ಶಿವಸೈನಿಕರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಂಬೈನ ಖಾರ್ ಪ್ರದೇಶದ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಕಮ್ರಾ ಶಿಂಧೆ ಅವರನ್ನು ದೇಶದ್ರೋಹಿ ಎಂದು ಉಲ್ಲೇಖಿಸಿ ಅವರ ವಿಡಂಬನೆಯ ಹಾಡನ್ನು ಹಾಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಮ್ರಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಹಾಸ್ಯಕ್ಕೆ ತನ್ನದೇ ಆದ ತತ್ವಗಳಿವೆ ಎಂದು ಹೇಳಿದ್ದಾರೆ. ಹಾಸ್ಯನಟ ಕುಣಾಲ್ ಕಾಮ್ರಾ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯನ್ನು ಅವಮಾನಿಸಲು ಪ್ರಯತ್ನಿಸಿದ ರೀತಿ ತಪ್ಪು, ನಾವು ಇದನ್ನು ಖಂಡಿಸುತ್ತೇವೆ. ಇಂತಹ ವಿಷಯಗಳನ್ನು ಸಹಿಸಲು ಸಾಧ್ಯವಿಲ್ಲ. 2024ರ ಚುನಾವಣೆಯಲ್ಲಿಯೇ ಸಾರ್ವಜನಿಕರು ಯಾರು ದೇಶದ್ರೋಹಿ ಮತ್ತು ಯಾರು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಕಾಮ್ರಾ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.(ಏಜೆನ್ಸೀಸ್)