ಅಜೇಯ್-ಕುನಾಲ್ ಪಾರ್ಟ್ನರ್ : 18 ವರ್ಷಗಳ ಬಳಿಕ ಒಂದಾದ ನಟ-ಗಾಯಕ

ಕುನಾಲ್ ಗಾಂಜಾವಾಲ
ಕುನಾಲ್ ಗಾಂಜಾವಾಲ
Published on

ಪ್ರಮುಖ ಮುಖ್ಯಾಂಶಗಳು

  • ಪಾರ್ಟ್ನರ್ ಚಿತ್ರದ ಹಾಡಿಗೆ ಧ್ವನಿಯಾದ ಗಾಯಕ ಕುನಾಲ್
  • ಚಿತ್ರದ ಅಮೋರಾ ಹಾಡಿ ರಂಜಿಸಿದ ಖ್ಯಾತ ಗಾಯಕ
  • ರೊಮ್ಯಾಂಟಿಕ್ ಸಾಂಗ್ ನಲ್ಲಿ ಅಜೇಯ್​- ಬೃಂದಾ ಆಚಾರ್ಯ ರೊಮ್ಯಾನ್ಸ್
ಬೆಂಗಳೂರು: ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿ ಹಲವು ಭಾಷೆಯ ಸುಮಾರು 1000ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾದವರು ಗಾಯಕ ಕುನಾಲ್ ಗಾಂಜಾವಾಲ. ಅದರಲ್ಲಿ 400ಕ್ಕೂ ಅಧಿಕ ಹಾಡುಗಳನ್ನು ಕನ್ನಡದಲ್ಲಿಯೇ ಅವರು ಹಾಡಿರುವುದು ವಿಶೇಷ. ಪುನೀತ್ ರಾಜಕುಮಾರ್ ಅಭಿನಯದ ಬಹುತೇಕ ಸಿನಿಮಾಗಳಿಗೆ ಕುನಾಲ್ ಧ್ವನಿಯಾಗಿದ್ದಾರೆ. ಇನ್ನು ಅಜೇಯ್ ರಾವ್ ಅಭಿನಯದ ‘ತಾಜಮಹಲ್’ ಚಿತ್ರದ ‘ಖುಷಿಯಾಗಿದೆ ಏಕೋ ನಿನ್ನಿಂದಲೇ’ ಹಾಡು ಹಾಡಿದ್ದು ಕೂಡ ಅವರೇ. ಇದೀಗ ತುಂಬಾ ವರ್ಷಗಳ ಬಳಿಕ ಕುನಾಲ್ ಮತ್ತು ಅಜೇಯ್ ಒಂದಾಗಿದ್ದಾರೆ. ಕನ್ನಡದ ‘ಪಾರ್ಟ್ನರ್’ ಸಿನಿಮಾದಲ್ಲಿ ಅಜೇಯ್ ರಾವ್ ಮತ್ತು ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿದ್ದು, ಚಿತ್ರದ ‘ಅಮೋರ’ ಎಂಬ ಶೀರ್ಷಿಕೆಯ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡಿಗೆ ಕುನಾಲ್ ಗಾಂಜಾವಾಲ ಧ್ವನಿಯಾಗಿದ್ದಾರೆ. ನಾಗಾರ್ಜುನ್ ಶರ್ಮಾ ರಚಿಸಿರುವ ‘ಅಮೋರ’ ಸಾಂಗ್‌ಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಯೂತ್‌ಫುಲ್ ಆಗಿ ಮೂಡಿಬಂದಿರುವ ಹಾಡಿನಲ್ಲಿ ಅಜೇಯ್-ಬೃಂದಾ ಕಾಣಿಸಿಕೊಂಡಿದ್ದಾರೆ. ಪಾಂಡಿಚೇರಿ ಸುತ್ತಮುತ್ತ ಕಲರ್‌ಫುಲ್ ಆಗಿ ಶೂಟಿಂಗ್ ಮಾಡಲಾಗಿದ್ದು, ಮುರಳಿ ಮಾಸ್ಟರ್ ನೃತ್ಯ ನಿರ್ದೇಶಿಸಿದ್ದಾರೆ. ಇನ್ನು ‘ಪಾರ್ಟ್ನರ್’ಗೆ ಶಿವತೇಜಸ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಜೇಯ್, ಬೃಂದಾ ಜತೆಗೆ ರಂಗಾಯಣ ರಘು, ಗೌರವ್ ಶೆಟ್ಟಿ, ಮನೋಹರ್ ಗೌಡ, ಚಿತ್ಕಲಾ ಬಿರಾದಾರ್, ಗಿರಿ ಶಿವಣ್ಣ, ಸುಷ್ಮಿತಾ ಗೌಡ ತಾರಾಗಣದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net