

ಬೆಂಗಳೂರು: ಪ್ರಕೃತಿ, ಅರಣ್ಯ, ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳ ವಿಶ್ವ ವಿಖ್ಯಾತ, ರಾಜ್ಯದ ಹೆಮ್ಮೆಯ ಕ್ರಿಕೆಟ್ ಪಟು ಅನಿಲ್ ಕುಂಬ್ಳೆಯವರು ಅರಣ್ಯ, ವನ್ಯಜೀವಿ ರಾಯಭಾರಿಯಾಗಲು ಒಪ್ಪಿರುವುದು ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಬಲ ತುಂಬಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಹರ್ಷ ವ್ಯಕ್ತಪಡಿಸಿದರು.
ಸಚಿವರ ಅಧಿಕೃತ ನಿವಾಸಕ್ಕೆ ಮಂಗಳವಾರ ಆಗಮಿಸಿ ಭೇಟಿಯಾದ ಅನಿಲ್‌ಕುಂಬ್ಳೆಯವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಖಂಡ್ರೆ ಬರ ಮಾಡಿಕೊಂಡರು.
ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ಯಾವುದೇ ಸಂಭಾವನೆಯಿಲ್ಲದೆ ಅರಣ್ಯ, ವನ್ಯಜೀವಿ ರಾಯಭಾರಿಯಾಗಲು ಅನಿಲ್ ಕುಂಬ್ಳೆ ಸಮ್ಮತಿಸಿದ್ದು, ಅವರ ಪರಿಸರ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.
ಲೆಗ್‌ಸ್ಪಿನ್ ಮೋಡಿಯಿಂದ ಭಾರತ ತಂಡದ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಕುಂಬ್ಳೆ, ಕರ್ನಾಟಕ ಅಷ್ಟೇ ಅಲ್ಲ ಭಾರತದ ಹೆಮ್ಮೆಯ ಪುತ್ರ. ಒಂದು ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಸಾಧನೆ ಮಾಡಿದವರಾಗಿದ್ದಾರೆ ಎಂದರು.
ಕ್ರಿಕೆಟ್ ಪ್ರಿಯರ ಹೃದಯದಲ್ಲಿ ನೆಲೆಸಿರುವ ಕುಂಬ್ಳೆಯವರು ಅರಣ್ಯ, ವನ್ಯಜೀವಿ ಸಂರಕ್ಷಣಯ ಬಗ್ಗೆ ಪ್ರಚಾರ, ಪ್ರಸಾರ ಮಾಡಲಿದ್ದಾರೆ. ಜನರಲ್ಲಿ ಜಾಗೃತಿ ಇನ್ನಷ್ಟು ಹೆಚ್ಚಲಿದೆ ಎಂಬ ವಿಶ್ವಾಸವನ್ನು ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಮಾತನಾಡಿ ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಿಸಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದಗಳು. ಇಲಾಖೆಯ ಜತೆಗೂಡಿ ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವೆ ಎಂದರು.