

ಬೆಂಗಳೂರು: ಪ್ರಶ್ನೆಗಳನ್ನು ಎತ್ತಿದರೆ, ವಸ್ತು ಸ್ಥಿತಿಯನ್ನು ಹೇಳಿದರೆ ಹಿಂದೂ ವಿರೋಧಿ ಎಂದು ಹೇಳಿ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಬಿಜೆಪಿಯ ಹಳೆ ಚಾಳಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಏನಾದರೂ 12ನೇ ಶತಮಾನದಲ್ಲಿ ಇದ್ದಿದ್ದರೆ ಮೌಢ್ಯದ ವಿರುದ್ಧ ವಚನ ಚಳವಳಿ ಕಟ್ಟಿದ್ದ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೊ ಏನೋ ಎಂದು ಕುಟುಕಿರುವ ಅವರು ಆಗಿನ ಮನುವಾದಿಗಳು ಶರಣರಿಗೆ ಪೀಡಿಸಿದ್ದರು ಎನ್ನುವುದು ಇತಿಹಾಸ ಎಂದು ಆರೋಪಿಸಿದ್ದಾರೆ.
ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು, ದಕ್ಷಿಣದ ದೇಶಕದು ಕುದುರೆಯಹುದೆ? ಎಂದು ಹೇಳಿದ ಕುವೆಂಪುರನ್ನು ಹಿಂದೂ ವಿರೋಧಿ ಎನ್ನುವ ದಮ್ಮು ತಾಕತ್ತು ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು, ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ. ವೇದಕ್ಕೆ ಬರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ ಎಂದ ಬಸವಣ್ಣರನ್ನು ಹಿಂದೂ ವಿರೋಧಿ ಎನ್ನುವಿರಾ? ಎಂದು ಬಿಜೆಪಿಯನ್ನು ಉದ್ದೇಶಿಸಿ ಉತ್ತರ ಬಯಸಿದ್ದಾರೆ.
ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ ಎಂದ ಅಕ್ಕಮಹಾದೇವಿಯನ್ನು ಹಿಂದೂ ವಿರೋಧಿ ಎನ್ನುವಿರಾ? ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ’ ಎಂದ ಅಂಬಿಗರ ಚೌಡಯ್ಯರನ್ನು ಹಿಂದೂ ವಿರೋಧಿ ಎನ್ನುವಿರಾ ಎಂದಿದ್ದಾರೆ.
ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಎಂದಿದ್ದ ಅಲ್ಲಮರನ್ನು ಹಿಂದೂ ವಿರೋಧಿ ಎನ್ನುವಿರಾ? ಯಾವ ಧರ್ಮವೂ ಕೂಡ ಕೆಟ್ಟ ಕೆಲಸ ಮಾಡಿ ಪುಣ್ಯ ಕ್ಷೇತ್ರಕ್ಕೆ ಬಂದರೆ ಪಾಪ ಪರಿಹಾರವಾಗುತ್ತದೆ ಎಂದಿಲ್ಲ, ನಿಮ್ಮ ಒಳ್ಳೆಯ ಕೆಲಸಗಳೇ ನಿಮ್ಮ ಪುಣ್ಯಕ್ಕೆ ದಾರಿ ಎನ್ನುತ್ತವೆ.
ಬಿಜೆಪಿಯವರು ಮೊದಲು ಹಿಂದೂ ಧರ್ಮದ ಅಧ್ಯಯನ ಮಾಡಲಿ, ಪಾಪ, ಪುಣ್ಯಗಳು ನದಿಗಳಲ್ಲಿ ಮುಳುಗೇಳುವುದರಿಂದ ನಿರ್ಧಾರವಾಗುವುದಿಲ್ಲ, ನಾವು ಮಾಡಿದ ಕೆಟ್ಟ ಕೆಲಸಗಳಿಗೆ ಕುಂಭ ಸ್ನಾನದಿಂದ ಮಾಫಿಯೂ ದೊರಕುವುದಿಲ್ಲ, ಗಂಗಾ ಸ್ನಾನ ಮಾಡಿದರೆ ಕೆಟ್ಟವನು ಒಳ್ಳೆಯವನಾಗುವುದಿಲ್ಲ, ಕರ್ಮ, ಕಾಯಕಗಳು ಮಾತ್ರ ನಮ್ಮನ್ನು ಉದ್ದರಿಸಬಲ್ಲವು ಎನ್ನುವುದನ್ನು ಹಲವು ಮಹನೀಯರು ಹೇಳಿದ್ದಾರೆ. ಬಿಜೆಪಿಯವರು ಧರ್ಮದ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು, ಸಾಧನೆ ಹೇಳಿಕೊಂಡು ರಾಜಕಾರಣ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.