ಕುಮಾರಸ್ವಾಮಿಗೆ ನನ್ನ ಮೇಲೆ ಬಹಳ ಲವ್!

dkshivakumar
Published on

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ಅದಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ, ಕೊಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿ, ಭಾವುಕನಾಗಿದ್ದಕ್ಕೆ ಕಣ್ಣಲ್ಲಿ ನೀರು ಬಂತು. ಅದನ್ನು ಟೀಕೆ ಮಾಡಿದ್ದಾರೆ. ಪರವಾಗಿಲ್ಲ, ಬೇರೆಯವರು ಯಾವಾಗ ಕಣ್ಣೀರು ಹಾಕಿದ್ದಾರೆ? ಎಷ್ಟು ಕುಟುಂಬಗಳ ಕಣ್ಣೀರು ಹಾಕಿಸಿದ್ದಾರೆ? ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ? ಎಂದು ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದರು. ನನಗೆ ಯಾವುದೇ ಇಮೇಜ್ ಅವಶ್ಯಕತೆ ಇಲ್ಲ. ಆರ್‌ಸಿಬಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಬಯಸಿದ್ದರು. ಬಿಜೆಪಿ, ಜೆಡಿಎಸ್ ಏನೆಲ್ಲ ಜಾಲತಾಣದಲ್ಲಿ ಹಂಚಿಕೊಂಡಿವೆ. ಆ ಮೇಲೆ ಹೇಗೆ ಉಲ್ಟಾ ಹೊಡೆದವು ಎಂಬುದು ಗೊತ್ತಿದೆ. ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರಿಗೆ ತೀಕ್ಷ್ಣವಾಗಿ ಉತ್ತರ ನೀಡಿದರು.

ಕ್ರೀಡಾಂಗಣಕ್ಕೆ ಹೋಗಿದ್ದರಲ್ಲಿ ತಪ್ಪೇನಿದೆ?:

ಕೆಲವು ಅಧಿಕಾರಿಗಳು ಪರಿಸ್ಥಿತಿ ಗಂಭೀರವಾಗುತ್ತಿದೆ. 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಬೇಕು ಎಂದು ಕೇಳಿಕೊಂಡರು. ಬೆಂಗಳೂರು ಉಸ್ತುವಾರಿ ಸಚಿವನಾಗಿ ನಾನು ಕ್ರೀಡಾಂಗಣಕ್ಕೆ ಹೋಗಿದ್ದೆ. ಅದರಲ್ಲಿ ತಪ್ಪೇನಿದೆ? ನಾನು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹೋಗಿ ಆಟಗಾರರಿಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದೆ. ಪೊಲೀಸ್ ಅಧಿಕಾರಿಗಳು ಬಹಿರಂಗ ಮೆರವಣಿಗೆಗೆ ಅವಕಾಶ ಬೇಡ ಎನ್ನುತ್ತಿದ್ದಾರೆ ಎಂದು ಅವರ ಜತೆ ಚರ್ಚೆ ಮಾಡಿದೆ. ಅವರಿಗೆ ಪರಿಸ್ಥಿತಿ ವಿವರಿಸಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜೀನಾಮೆ ನೀಡುವ ಬದಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ಯಾರು ಯಾವ ಸಮಯದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ಮಾತನಾಡೋಣ. ಜನಸಾಮಾನ್ಯರ ಹಿತದೃಷ್ಟಿಯಿಂದ ಸಿಎಂ ಕ್ರಮ ಕೈಗೊಂಡಿದ್ದಾರೆ. ಅವರು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮಧ್ಯಾಹ್ನ 3.30ಕ್ಕೆ ಅಭಿಮಾನಿಗಳು ಮೃತಪಟ್ಟ ದುರ್ಘಟನೆ ಮಾಹಿತಿ ಇರಲಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net