ತಮ್ಮ ಸರ್ಕಾರ ತೆಗೆದವರನ್ನೇ ತಬ್ಬಿಕೊಳ್ಳುವ ದುಸ್ಥಿತಿಗೆ ಕುಮಾರಸ್ವಾಮಿ!

Dk HDK
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾವು ಮುಂಗುಸಿಯಂತೆ ಕಿತ್ತಾಡುವುದು ಬಹಳ ಕಾಲದಿಂದಲೂ ಇದೆ. ಮೈತ್ರಿ ಸರ್ಕಾರದ ರಚನೆಯಾದ ಬಳಿಕ ತಣ್ಣಗಾಗಿದ್ದ ಇವರ ಜಟಾಪಟಿ ಈಗ ಪುನಃ ಆರಂಭವಾದಂತೆ ಕಾಣಿಸಿದೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮುಖಂಡರನ್ನು ಕಾಂಗ್ರೆಸ್​ಗೆ ಬರಮಾಡಿಕೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್​, ತಮ್ಮ ಸರ್ಕಾರ ಉರುಳಿಸಿದವರನ್ನೇ ಜತೆಯಲ್ಲೇ ಕೂರಿಸಿಕೊಂಡು ಈಗಿನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಹಾಗೂ ಅವರನ್ನು ತಬ್ಬಿಕೊಳ್ಳುವ ದುಸ್ಥಿತಿಗೆ ಕುಮಾರಸ್ವಾಮಿ ಅವರು ಇಳಿದಿದ್ದಾರೆ ಲೇವಡಿ ಮಾಡಿದ್ದಾರೆ.

ನಮಗೆ ಸಂಬಂಧಪಟ್ಟಿದ್ದಲ್ಲ

ಬಿಜೆಪಿ ಮತ್ತು ಜೆಡಿಎಸ್ ನವರು ಮೈತ್ರಿ ಆದರೂ ಮಾಡಿಕೊಳ್ಳಲಿ, ಏನನ್ನಾದರೂ ಜೋಡಿಸಿಕೊಳ್ಳಲಿ, ಅದು ನಮಗೆ ಸಂಬಂಧಪಟ್ಟಿದ್ದಲ್ಲ ಎಂದ ಅವರು, ನಾನು ಅನೇಕ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಕೇಳಿದೆ. ಅದಕ್ಕೆ ಅವರುಗಳು “ನಮ್ಮ ಸರ್ಕಾರ ಬೀಳಿಸಿದವರ ಹತ್ತಿರವೇ ಕುಮಾರಸ್ವಾಮಿ ಅವರಿಗೆ ಮತ್ತೆ ಏಕೆ ನೆಂಟಸ್ತನ? ಹಾಗಾದರೆ ಪಕ್ಷದ ನೀತಿ ಏನು? ನಾವು ಕಾರ್ಯಕರ್ತರಿಗೆ ಏನು ಹೇಳುವುದು ಎಂದು ಕೇಳುತ್ತಿದ್ದಾರೆ, ನಮಗೆ ಉತ್ತರ ನೀಡಲು ಆಗುತ್ತಿಲ್ಲ” ಎಂದು ಹೇಳುತ್ತಿದ್ದಾರೆ ಎಂದರು.

ದುಸ್ಥಿತಿಗೆ ಬಿಜೆಪಿ

ಚುನಾವಣೆ ಮುಗಿದು 110 ದಿನಗಳಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದ ದುಸ್ಥಿತಿಗೆ ಬಿಜೆಪಿ ಬಂದಿದೆ. ಅವರವರ ಅನುಕೂಲಕ್ಕೆ ಬಿಜೆಪಿ- ಜೆಡಿಎಸ್ ರಾಜಕಾರಣ ಮಾಡುತ್ತಿವೆ. ಯಾರ ವಯಸ್ಸೂ ಕಡಿಮೆಯಾಗುವುದಿಲ್ಲ, ದೊಡ್ಡ- ದೊಡ್ಡ ನಾಯಕರು ಮೇಲೆಯೇ ಕುಳಿತಿರುತ್ತಾರೆ. ಕಾರ್ಯಕರ್ತರು ಹಾಗೂ ಮುಖಂಡರುಗಳು ನೆಲದಲ್ಲೇ ಕುಳಿತಿರುತ್ತಾರೆ ಎಂದು ಹೇಳಿದರು.

ಪಕ್ಷಕ್ಕೆ ಸೇರಿದವರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಕಾಂಗ್ರೆಸ್ ನಡೆಸಿಕೊಳ್ಳುತ್ತದೆ. ತಾಳ್ಮೆಯಿಂದ ಇದ್ದರೆ ಒಂದಲ್ಲ ಒಂದು ದಿನ ಸೂಕ್ತ ಸ್ಥಾನಮಾನ ದೊರೆಯುತ್ತದೆ. ಸಾಕಷ್ಟು ಸಮಿತಿಗಳು, ನಿಗಮ ಮಂಡಲಿಗಳು ಇದ್ದಾವೆ, ಅವಸರ ಬೇಡ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net