ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ; ವರದಿ ಸ್ವೀಕರಿಸದಂತೆ Kumaraswamy ಸಚಿವರಿಗೆ ಸೂಚಿಸಿದ್ದರು: ಸಿದ್ದರಾಮಯ್ಯ ಆರೋಪ

Untitled design
Published on

2015ರಲ್ಲಿ ನಾನು ಸಿಎಂ ಇದ್ದಾಗ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಆದರೆ, ಸಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ (Kumaraswamy) ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಸೂಚನೆ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ನಡೆದ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 2015ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಕೇವಲ ಹಿಂದುಳಿದ ವರ್ಗವಲ್ಲದೇ ಎಲ್ಲ ಜನರನ್ನು ಸಮೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದ್ದು, ಆಯೋಗವು ಸಮೀಕ್ಷೆಯನ್ನು ನಡೆಸಿತು.

2018ರಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕೋರಿದರು. ಆಯೋಗದ ಕೋರಿಕೆಯನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದರೂ, ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಕುಮಾರಸ್ವಾಮಿಯವರು ಸೂಚನೆ ನೀಡಿದ್ದರು ಎಂದರು.

ಜಾತಿಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ

ಸಮ್ಮಿಶ್ರ ಸರ್ಕಾರದಲ್ಲಿ ನಂತರದ ಮೂರು ವರ್ಷ, ಹತ್ತು ತಿಂಗಳು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಆಯೋಗದ ವರದಿಯನ್ನು ಸ್ವೀಕರಿಸುವುದಾಗಲಿ, ಜಾರಿ ಮಾಡುವ ಬಗ್ಗೆಯಾಗಲಿ ಕೈಹಾಕಲಿಲ್ಲ. ನಂತರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಗಡೆಯವರು ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಿದರು. ಈ ವರದಿಯನ್ನು ನಮ್ಮ ಸಚಿವ ಸಂಪುಟದಲ್ಲಿ ಮಂಡಸಿ ಚರ್ಚಿಸಿದಾಗ, ಸದರಿ ವರದಿಯು ಹತ್ತು ವರ್ಷದ ಹಿಂದಿನ ಸಮೀಕ್ಷೆಯನ್ನು ಆಧರಿಸಿರುವುದರಿಂದ ಪುನ: ಸಮೀಕ್ಷೆ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ. ಸಚಿವ ಸಂಪುಟದ ನಿರ್ಣಯದಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶದಲ್ಲಿ ಮರುಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆಯೋಗವು ನೀಡಿದ ವರದಿಯನ್ನು ಜಾರಿ ಮಾಡಲಾಗುವುದು ಎಂದು ವಿವರಿಸಿದರು. 1931 ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು ‘ಕರ್ನಾಟಕ ಮಾದರಿ’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧ

ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಅಹಿಂದ ತತ್ವವು ಎಲ್ಲರಿಗೂ ಸಮಪಾಲು, ಸಮಬಾಳು ಎಂಬುದರ ಆಧಾರವಾಗಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ಸಮಾನತೆ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಬೇಕಾಗಿದೆ. ನ್ಯಾಯಯೋಧ ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಜಾತಿಗಣತಿ ಕೇವಲ ಜಾತಿಗಳ ಗಣತಿಯಾಗಿರದೇ, ಅದು ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು  ರಾಹುಲ್ ಗಾಂಧಿಯವರು ಕೈಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net