

Mamata Banerjee: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲೆ ಕಿರುಕುಳ ನಡೆದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಕರಿಕೆ ಶಾಲೆಗೆ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ
ಕೋಲ್ಕತ್ತಾದಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ''ನಾನು ಬಂಗಾಳಿ ಭಾಷೆಯಲ್ಲಿ ಹೆಚ್ಚು ಮಾತನಾಡಲು ನಿರ್ಧರಿಸಿದ್ದೇನೆ. ಬೇಕಿದ್ದರೆ ನನ್ನನ್ನು ಬಂಧನದಲ್ಲಿರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ಬಿಜೆಪಿ ಸರ್ಕಾರವು ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿ ಬಂಧನ ಶಿಬಿರಗಳಲ್ಲಿ ಇಡುವಂತೆ ಅಧಿಸೂಚನೆ ಹೊರಡಿಸಿದೆ. ಇದನ್ನು ಎಲ್ಲಾ ಬಿಜೆಪಿ ಆಡಳಿತದ ರಾಜ್ಯಗಳಿಗೆ ಕಳುಹಿಸಲಾಗಿದೆ. ನಾವು ಆ ಅಧಿಸೂಚನೆಯನ್ನು ವಿರೋಧಿಸುತ್ತೇವೆ. ಬಂಗಾಳಿ ಮಾತನಾಡುವ ಎಲ್ಲರನ್ನೂ ನೀವು ಹೇಗೆ ಜೈಲಿಗೆ ಕಳುಹಿಸುತ್ತೀರಿ?" ಎಂದು ಮಮತಾ ಪ್ರಶ್ನಿಸಿದರು.
"ಪಶ್ಚಿಮ ಬಂಗಾಳದ ನಾಗರಿಕರು ಅಧಿಕೃತ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಅವರು ಕೌಶಲ್ಯ ಹೊಂದಿರುವುದರಿಂದ ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದವರು ಬಂಗಾಳದವರಿಂದ ಕೆಲಸ ಮಾಡಿಸುತ್ತಿದ್ದಾರೆ. ಆದರೆ, ಅವರು ಬಂಗಾಳಿ ಭಾಷೆ ಮಾತನಾಡಿದ ತಕ್ಷಣ ಅವರನ್ನು ಬಂಧಿಸುತ್ತಾರೆ. ಅವರನ್ನೆಲ್ಲಾ ಬಂಧಿಸಲು ನಿಮಗೆ ಯಾರು ಹಕ್ಕು ನೀಡಿದ್ದಾರೆ? ಬಂಗಾಳ ಭಾರತದ ಭಾಗವಲ್ಲವೇ?" ಎಂದು ಅವರು ಗುಡುಗಿದರು.
ಒಡಿಶಾದಲ್ಲಿ ವಲಸೆ ಕಾರ್ಮಿಕರ ಬಂಧನ, ಭಾಷಾವಾರು ಪ್ರೊಫೈಲಿಂಗ್ ಮತ್ತು ದೆಹಲಿಯಿಂದ ಹೊರಹಾಕುವ ಅಭಿಯಾನಗಳ ವರದಿಗಳು ಟಿಎಂಸಿ ಮತ್ತು ಬಿಜೆಪಿ ನಡುವಿನ ಇತ್ತೀಚಿನ ಸಂಘರ್ಷಗಳಾಗಿವೆ. ಸುಮಾರು 22 ಲಕ್ಷ ಬಂಗಾಳ ಕಾರ್ಮಿಕರು ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ.
ನಿರಂತರ ಮಳೆಯ ನಡುವೆಯೂ 3 ಕಿ.ಮೀ. ಪಾದಯಾತ್ರೆಯಲ್ಲಿ "ಬಿಜೆಪಿ, ಛೀ ಛೀ" (ನಿಮಗೆ ನಾಚಿಕೆಯಾಗಬೇಕು ಬಿಜೆಪಿ) ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಸುಮಾರು 1,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್ ಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಎಲ್ಲಾ ನಾಯಕರು ಪಾಲ್ಗೊಂಡಿದ್ದರು. (ಏಜೆನ್ಸೀಸ್)