

ಬೆಂಗಳೂರು: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ, ಮೇಲ್ಮನೆ ಆರು ಸ್ಥಾನಗಳ ಚುನಾವಣೆಗಳ ನಡುವೆಯೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎರಡು ದಿನ ಜಾಲಿ ಟ್ರಿಪ್ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಚುನಾವಣೆ ರಾಜಕೀಯ, ಪ್ರಜ್ವಲ್ ಲೈಂಗಿಕ ದೌರ್ಜನ್ಯದಿಂದ ತತ್ತರಿಸಿದ್ದ ಕುಮಾರಸ್ವಾಮಿ ತಮ್ಮ ಇಡೀ ಕುಟುಂಬದೊಂದಿಗೆ ಎರಡು ದಿನ ಕಬಿನಿ ಹಿನ್ನೀರಿನ ರೆಸಾರ್ಟ್‌ವೊಂದರಲ್ಲಿ ಬೀಡು ಬಿಟ್ಟಿದ್ದರು.
ರಾಜಕೀಯ ಕೆಸರೆರಚಾಟದ ನಡುವೆ ಹೈರಾಣಾಗಿದ್ದ ಕುಮಾರಸ್ವಾಮಿ ತಮ್ಮ ಪತ್ನಿ, ಪುತ್ರ, ಸೊಸೆ ಹಾಗೂ ಮೊಮ್ಮಗನೊಂದಿಗೆ ಎರಡು ದಿನ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆದರು.
‘ಪ್ರಜ್ವಲ್ ಪ್ರಕರಣ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಜಾಲಿ ಟ್ರಿಪ್ ಅವಶ್ಯಕತೆ ಇತ್ತಾ? ಕುಮಾರಸ್ವಾಮಿಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ನಾಚಿಕೆಗೇಡು’ ಎಂದು ಕಾಂಗ್ರೆಸ್ ಕಿಡಿಕಾರಿತ್ತು.
‘ಪ್ರಕರಣ ಕುರಿತು ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಹೇಡಿತನವೊ ಅಥವಾ ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂದೇಶ ನೀಡುವುದಕ್ಕೋ ಈ ಜಾಲಿ ಟ್ರಿಪ್ ಎಂದೂ ಪ್ರಶ್ನಿಸಿತ್ತು. ಈ ಎಲ್ಲ ಆರೋಪಗಳ ನಡುವೆಯೂ ಕುಮಾರಸ್ವಾಮಿ ಕುಟುಂಬದೊಂದಿಗೆ ಜಾಲಿ ಟ್ರಿಪ್ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.