

ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿ ಎಂದೂ ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.
ಕೈಗಾರಿಕಾ ನಿವೇಶನಕ್ಕೆ ಎಚ್.ಡಿ. ಕುಮಾರಸ್ವಾಮಿ 1985ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಅರ್ಜಿ ಸಲ್ಲಿಸಿದ್ದರು. ಕುಮಾರಸ್ವಾಮಿ ಅವರ ಅರ್ಜಿಯನ್ನು ಮುಡಾ ಪರಿಶೀಲಿಸಿ ನಿವೇಶನ ಮಂಜೂರು ಮಾಡಿತ್ತು. ಆ ನಂತರ ಕುಮಾರಸ್ವಾಮಿ ಅವರಿಗೆ ಮಂಜೂರಾದ ನಿವೇಶನದ ಅರ್ಧ ಭಾಗವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಬದಲಿ ನಿವೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಮಾರಸ್ವಾಮಿ ಹೆಸರಿನಲ್ಲಾಗಲಿ ಅಥವಾ ಅವರ ಪತ್ನಿ ಅನಿತಾ, ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಾಗಲಿ ಮುಡಾದ ವಾಣಿಜ್ಯ ಅಥವಾ ವಸತಿ ನಿವೇಶನ ಇಲ್ಲ. ಕುಮಾರಸ್ವಾಮಿ ಜೆಪಿ ನಗರದಲ್ಲಿ ಕೈಗಾರಿಕಾ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರಿಗೆ ನಿವೇಶನ ಮಂಜೂರಾತಿ ಮಾಡಲಾಯಿತು. ಅದಕೋಸ್ಕರ ಅವರು 1985ರಲ್ಲಿಯೇ ಹಣವನ್ನು ಮುಡಾಗೆ ಪಾವತಿ ಮಾಡಿದ್ದು, ಆ ಹಣ ಇನ್ನೂ ಪ್ರಾಧಿಕಾರದಲ್ಲಿ ಇದೆ. ಆದರೆ, ಇದುವರೆಗೂ ಅವರಿಗೆ ನಿವೇಶನ ದೊರೆತ್ತಿಲ್ಲ ಎಂದರು.
ಕುಮಾರಸ್ವಾಮಿ ಎರಡು ಬಾರಿ ಮುಖ್ಯಯಾಗಿದ್ದರು. ಮನಸ್ಸು ಮಾಡಿದ್ದಾರೆ ಆ ಸಂದರ್ಭದಲ್ಲಿಯೇ ಅವರು ತಮ್ಮ ಪ್ರಭಾವ ಬಳಸಿ ನಿವೇಶನ ಪಡೆಯಬಹುದಿತ್ತು. ಆದರೆ ಆ ಕುರಿತು ಅವರು ಆಸಕ್ತಿ ತೋರಲಿಲ್ಲ. ಆದರೆ, ಈ ವಿಚಾರವಾಗಿ ರಾಜಕೀಯವಾಗಿ ಟೀಕೆ ಮಾಡಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಹೇಳಿಕೆ ನೀಡಬಾರದು. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಕ್ಲೀನ್ ಮಾಡಿಕೊಳ್ಳಿ ನಂತರ ಬೇರೆಯವರ ತಟ್ಟೆಯಲ್ಲಿರುವ ನೊಣವನ್ನು ನೋಡಲು ಹೋಗಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ಗೆ ತಿರುಗೇಟು ನೀಡಿದರು.
ಮುಡಾದಲ್ಲಿ ಕೆಲವರು ನಡೆಸಿದ ಹಗರಣದಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ತಿಂಗಳಿನಿಂದ ಮುಡಾದಲ್ಲಿ ಖಾತೆ, ಕಂದಾಯ ಆಗುತ್ತಿಲ್ಲ. ಮನೆ ನಿರ್ಮಾಣದ ನಕ್ಷೆಗೆ ಅನುಮೋದನೆ ದೊರೆಯುತ್ತಿಲ್ಲ. ಯಾರೋ ಮಾಡಿದ ತಪ್ಪಿಗೆ ಜನರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ದೂರು ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆರ್‌ಟಿಐ ಕಾರ್ಯಕರ್ತ ಎಂಬುದು ಹುದ್ದೆಯಲ್ಲ. ಬೇರೆಯವರ ಬಗ್ಗೆ ಮಾತನಾಡುವಾಗ ಇತಿಮಿತಿ ಇರಬೇಕು. ಆರ್‌ಟಿಐನಲ್ಲಿ ಯಾರು ಬೇಕಾದರೂ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು. ಸಮಾಜಕ್ಕೆ ಒಳ್ಳೆಯದ್ದು ಮಾಡುವ ಅಥವಾ ಹಗರಣ ಬಯಲಿಗೆಳೆಯುವ ಆರ್‌ಟಿಐ ಕಾರ್ಯಕರ್ತರನ್ನು ಬೆಂಬಲಿಸೋಣ. ಆದರೆ, ಕೆಲವು ಆರ್‌ಟಿಐ ಕಾರ್ಯಕರ್ತರು ಆರ್‌ಟಿಐ ಮಾಹಿತಿ ಪಡೆಯುವುದನ್ನೇ ಜೀವನ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು. ಮುಡಾ ಹಗರಣಕ್ಕೆ ಸಂಬಂಧಿ ಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದರೆ ತನಿಖೆಯ ಮೇಲೆ ವಿಶ್ವಾಸ ಇಲ್ಲ ಎಂಬಂತಾಗುತ್ತದೆ. ಹಾಗಾಗಿ ತನಿಖೆ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದರು.
ನಾಲೆಯಿಂದ ಅನಧಿಕೃತವಾಗಿ ನೀರೆತ್ತುವವರಿಗೆ ಶಿಕ್ಷೆ ವಿಧಿಸುವ ಮತ್ತು ನಾಲೆಯ 500 ಮೀಟರ್ ವ್ಯಾಪ್ತಿಯಲ್ಲಿ ಕೊಳವೆ ಬಾವಿ ತೋಡಿದ್ದರೆ ನೋಂದಣಿ ಕಡ್ಡಾಯಗೊಳಿಸುವ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕದೆ ಇರುವುದು ಉತ್ತಮ. ರೈತರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಪಡಿಸುವುದು ಸರಿಯಲ್ಲ. ಕೂಡಲೇ ವಿಧೇಯಕ ಹಿಂಪಡೆಯಬೇಕು. ನದಿ ನೀರು ಕುಡಿಯಲು ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.