ಗ್ಯಾರಂಟಿಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಲ್ಲ

JDS LOGO
Published on

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಲ್ಲ. ಕಾಂಗ್ರೆಸ್ ಹಸಿಸುಳ್ಳು ಹಬ್ಬಿಸುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್ ಪುರಾತನ-ಪರಂಪರಾಗತ ಚಾಳಿ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಆಳುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ಆಧುನಿಕ ಅವತಾರವೇ ಕಾಂಗ್ರೆಸ್. ಜನರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ ಹಾಗೂ ಕರ್ನಾಟಕದಲ್ಲಿ ತನ್ನ ರಕ್ಕಸಭೋಜನ ಮುಂದುವರಿದೆ ಎಂದು ಹರಿಹಾಯ್ದಿದೆ.

ತುರುವೇಕೆರೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕಾಂಗ್ರೆಸ್ ಫೇಕ್ ಫ್ಯಾಕ್ಟರಿ ತಿರುಚಿ ಮೈ ಪರಚಿಕೊಳ್ಳುತ್ತಿದೆ. ಕುಮಾರಸ್ವಾಮಿ ಅವರು ‘ಕಾಂಗ್ರೆಸ್ ಗ್ಯಾರಂಟಿಗಳಿಂದ ತಾಯಂದಿರನ್ನು ದಿಕ್ಕು ತಪ್ಪಿಸುತ್ತಿದೆ’ ಎಂದು ಹೇಳಿದ್ದಾರೆ. ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವ ಬದಲು ಅಗ್ಗದ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. ಇದೇ ಹಳ್ಳಿ ತಾಯಂದಿರ ಬದುಕಿಗೆ ನರಕವಾಗಿದ್ದ ಸಾರಾಯಿ, ಲಾಟರಿ ನಿಷೇಧ ಮಾಡಿ ಅವರ ಮಾಂಗಲ್ಯ ಉಳಿಸಿದ್ದು ಇದೇ ಕುಮಾರಣ್ಣ. ನಿತ್ಯನರಕವಾಗಿದ್ದ ಅವರ ಬದುಕಿಗೆ ಸಾಂತ್ವನ ಹೇಳಿದ್ದೂ ಇವರೇ. ವಿಧವಾ ಪಿಂಚಣಿಯನ್ನು 200 ರಿಂದ 400ರೂ.ಗೆ ಹೆಚ್ಚಿಸಿ ಅವರಿಗೆ ಶಕ್ತಿ ತುಂಬಿದ್ದು ಕುಮಾರಣ್ಣ ಅಲ್ಲವೇ? ಎಂದು ಕೆಣಕಿದೆ.

2018-19ರಲ್ಲಿ ಕರ್ನಾಟಕ ಕಾಂಗ್ರೆಸ್ ವಿರೋಧ ಲೆಕ್ಕಿಸದೆ ರೈತರ 25,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಹಳ್ಳಿ ತಾಯಂದಿರ ಅಣ್ಣ ಇದೇ ಕುಮಾರಣ್ಣ. ಸಾಲ ಮನ್ನಾ ನಮ್ಮ ಕಾರ್ಯಕ್ರಮವೇ ಅಲ್ಲ. ನಮ್ಮ ಭಾಗ್ಯಗಳಿಗೆ ನಯಾಪೈಸೆ ಕಮ್ಮಿ ಆಗುವ ಹಾಗಿಲ್ಲ ಎಂದು ಟವೆಲ್ ಕೊಡವಿದ್ದು ಯಾರು ಕಾಂಗ್ರೆಸ್ಸಿಗರೇ? ನಿಮಗೆ ನೆನಪಿಲ್ಲವೇ? ಇಂಥ ಕುಮಾರಣ್ಣ ತಾಯಂದಿರನ್ನು ಅಪಮಾನಿಸುತ್ತಾರೆಯೇ? ಸುಳ್ಳು ಹೇಳಿದರೆ ಜನ ನಂಬುತ್ತಾರೆಯೇ? ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

ಒಂದು ಕೈಯ್ಯಲ್ಲಿ 2000 ರೂ. ಕೊಟ್ಟು ಇನ್ನೊಂದು ಕೈಯ್ಯಲ್ಲಿ ತಾಯಂದಿರ ಮನೆಗಳ ಪಕ್ಕದ ಕಿರಾಣಿ ಅಂಗಡಿಗಳಲ್ಲಿಯೇ ಮದ್ಯದ ಬಾಟಲಿ ಮಾರಾಟ ಮಾಡುತ್ತಿರುವುದು ಇದೇ ಢೋಂಗಿ ಗ್ಯಾರಂಟಿ ಕಾಂಗ್ರೆಸ್ ಸರ್ಕಾರ! ಇಲ್ಲ ಎನ್ನಲು ಅವರಿಗೆ ಧೈರ್ಯ, ನೈತಿಕತೆ ಇದೆಯೇ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮದ್ಯಪಾನಕ್ಕೆ ಭಾರೀ ಪ್ರೋತ್ಸಾಹ ಕೊಡುವುದು ‘ಕಾಂಗ್ರೆಸ್‌ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಾಗಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net