

ಬೆಂಗಳೂರು: ಕನ್ನಡ ಚಿತ್ರರಂಗದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಬ್ಯಾಂಕಾಕ್ ಪ್ರವಾಸದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ. ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ. ಆರೋಗ್ಯವಾಗಿ ಇದ್ದವರಿಗೆ ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಬರುತ್ತದೆಯೆಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬದವರು ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಆಘಾತಕಾರಿ ಘಟನೆ ಎಂದು ದುಖಃ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಆಗುತ್ತಿವೆ. ಕೋವಿಡ್ ನಂತರ ಆದ ಕೆಲ ಸಮಸ್ಯೆ, ಮನುಷ್ಯನ ದೇಹದ ಮೇಲೆ ಆಗಿರೋ ಸಮಸ್ಯೆಗಳಿಂದ ಹೀಗಾಗುತ್ತಿದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ, ಜಾಗೃತೆಯಿಂದ ಆರೋಗ್ಯದ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಆಗಾಗ ಚೆಕಪ್ ಮಾಡಿಸಿಕೊಳ್ಳುವ ಕೆಲಸವೂ ಆಗಬೇಕು. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಕುಟುಂಬದಲ್ಲಿ ದೊಡ್ಡ ನೋವು ತರಿಸಿದೆ. ಆ ನೋವಿನಿಂದ ಹೊರ ಬರೋದು ತುಂಬಾ ಕಷ್ಟ. ಅವರ ಕುಟುಂಬಕ್ಕೆ ಅ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಹೇಳಿದರು.