

ಚಿಕ್ಕಮಗಳೂರು: ಸಮಾಜದಲ್ಲಿ ಪೊಲೀಸರ ಮಕ್ಕಳು ಸಾಧಕರಾದರೆ ಇಲಾಖೆಗೆ ಕೀರ್ತಿ ಸಲ್ಲುತ್ತದೆ. ವಿದ್ಯಾರ್ಥಿಗಳು ತಮಗೆ ಇಷ್ಟವಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಯಾವುದೇ ಒಂದು ವಿಚಾರದ ಬಗ್ಗೆ ಕಲಿಯಲು ನಿಗದಿತ ಸಮಯ ಇರುವುದಿಲ್ಲ. ಕಲಿಕೆ ಎಂಬುದು ನಿರಂತರವಾಗಿರುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸದಾ ಸಾಧನೆ ಮನೋಭಾವ ಕಾಣುತ್ತಿರಬೇಕು. ಪೊಲೀಸರ ಮಕ್ಕಳು ಯಾವುದಕ್ಕೂ ಕಡಿಮೆಯಿಲ್ಲ ಎಂಬುದನ್ನು ತೋರಿಸಬೇಕು. ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮಕ್ಕಳ ಸಾಧನೆ ಹಿಂದೆ ತಂದೆ ಪರಿಶ್ರಮಕ್ಕಿಂತ ತಾಯಿ ಪರಿಶ್ರಮ ಹೆಚ್ಚಾಗಿರುತ್ತವೆ ಎಂದರು.
ಮಕ್ಕಳು ಕೇವಲ ಶಿಕ್ಷಣದಲ್ಲಿ ಅಲ್ಲದೇ ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದರ ದಾರಿ ತೋರಿಸಬೇಕು. 24*7 ಕಾರ್ಯನಿರ್ವಹಿಸುವುದು ಪೊಲೀಸರು ಮಾತ್ರ. ಇಲಾಖೆಯನ್ನು ಕುಟುಂಬ ಎಂದೇ ಭಾವಿಸಲಾಗುತ್ತಿದೆ. ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಮ್ಮಲ್ಲಿರುವ ಪ್ರತಿಭೆ ಅನಾವಣಗೊಳಿಸಿದಾಗ ಸಮಾಜದಲ್ಲಿ ಯಾರೆಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಿಗದಿತ ಗುರಿ ಹೊಂದಿಕೊಂಡು ಪರಿಶ್ರಮ ಪಡಬೇಕು.ಉನ್ನತ ಅಧಿಕಾರಿಗಳ ಮಕ್ಕಳು ಮಾತ್ರ ಸಾಧಕರು ಆಗಬೇಕು ಎಂಬುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ಜೀವನದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ದರಾಗಬೇಕು. ತಮಗೆ ಅಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರಿಯಲು ಪ್ರತಿಯೊಬ್ಬ ಪಾಲಕರು ಸಹಕಾರ ನೀಡುತ್ತಾರೆ. ಅವರ ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದರು.