

ಕೂಡ್ಲಿಗಿ: ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಉದ್ದೇಶದಿಂದ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ 74 ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಸರ್ಕಾರದಿಂದ 800 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಕೆಲಸ ಕೈಗೆತ್ತಿಕೊಂಡಿದ್ದು, ಕಾಮಗಾರಿ ಭರದಿಂದ ಸಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಪಪಂ ಆವರಣದಲ್ಲಿ ಗುರುವಾರ ಕೂಡ್ಲಿಗಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಚೇರಿ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ರೈತರ ಸಂಕಷ್ಟಗಳ ಬಗ್ಗೆ ಅರಿವಿದ್ದು, ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಸ್ಥಳೀಯವಾಗಿ ರೈತರಿಗೆ ಸಾಲ, ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕ್ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲಿದ್ದು, ಕಡಿಮೆ ಬಡ್ಡಿ ದರದಲ್ಲಿ ಕೃಷಿ ಪರಿಕರಗಳು ಲಭ್ಯವಾಗಲಿವೆ. ರೈತರು ಸಹ ಷೇರುಗಳನ್ನು ಹಾಕಿ ಪಾರದರ್ಶಕ ವ್ಯವಹಾರಕ್ಕೆ ಒತ್ತು ನೀಡಬೇಕು. ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕದಂತೆ ಬ್ಯಾಂಕ್‌ನ್ನು ನಡೆಸಿಕೊಂಡು ಹೋಗಲು ರೈತರಿಗೆ ಕಿವಿಮಾತು ಹೇಳಿದರು.
ಕ್ಷೇತ್ರದ ಬಿ.ಡಿ.ಗುಡ್ಡದಿಂದ ಉಜ್ಜಿನಿ ರಸ್ತೆವರೆಗೆ ಹಾಗೂ ಪೂಜಾರಹಳ್ಳಿಯಿಂದ ಲೋಕಿಕೆರೆ ಗ್ರಾಮದವರೆಗಿನ ರಸ್ತೆಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ಭೂಮಿ ಪೂಜೆ ಮಾಡಿದರು.
ತಾಪಂ ಇಒ ವೈ.ರವಿಕುಮಾರ್, ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ದೇವರಮನಿ ಮಹೇಶ್, ಎಂ.ಬಸವರಾಜ ಕಕ್ಕುಪ್ಪಿ, ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಸದಸ್ಯರಾದ ಪಿ.ಚಂದ್ರು, ಬಾಸೂನಾಯ್ಕ, ತಳಾಸ್ ವೆಂಕಟೇಶ್, ಕೆ.ಈಶಪ್ಪ, ಕೆ.ಎಚ್.ವೀರನಗೌಡ, ಜಿಪಂ ಮಾಜಿ ಸದಸ್ಯ ಎಚ್.ರೇವಣ್ಣ, ಸೂರ್ಯಪಾಪಣ್ಣ, ಎಸ್.ಪಿ.ಪ್ರಕಾಶ್, ಮಂಜುನಾಥ, ಬಿ.ಭೀಮೇಶ್, ಎಸ್.ದುರುಗೇಶ್, ಎಂ.ಶಿವಣ್ಣ, ನಾರಾಯಣಿ, ಶರಣ ಗೌಡ, ಪವಿತ್ರಾ, ಶೋಭಾ ಇದ್ದರು.