ವ್ಯಾಪಕ ಆಕ್ರೋಶದ ಬೆನ್ನಲ್ಲೇ ಮಹಿಳೆಯರಲ್ಲಿ ಕ್ಷಮೆಯಾಚಿಸಿದ ಬಿಆರ್​ಎಸ್​ ಅಧ್ಯಕ್ಷ ಕೆಟಿಆರ್​!

ವಿಜಯವಾಣಿ - 2024-08-16T134208.218
Published on

ತೆಲಂಗಾಣ: ರಾಜ್ಯದಲ್ಲಿ ಈ ವರ್ಷ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಸ್​ನಲ್ಲಿ ಹೆಚ್ಚಾಗಿ ಸಂಚರಿಸಲು ಶುರುಮಾಡಿರುವ ಮಹಿಳೆಯರು, ಬ್ರೇಕ್ ಡ್ಯಾನ್ಸ್ ಮಾಡೋದು, ಬಟ್ಟೆ ಹೊಲಿಯುವುದು ಹೀಗೆ ನಾನಾ ರೀತಿಯ ಚುಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದ ಬಿಆರ್​ಎಸ್​ ಅಧ್ಯಕ್ಷರಾದ ಕೆ.ಟಿ. ರಾಮ ರಾವ್, ತಮ್ಮ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ನಾಲಿಗೆಯನ್ನು ಹರಿಬಿಟ್ಟರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸಿಡಿದೆದ್ದ ರಾಜ್ಯದ ಮಹಿಳೆಯರು, ಕೆಟಿಆರ್ ವ್ಯಂಗ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಟಿಆರ್​, ಕಾಂಗ್ರೆಸ್​ ಸರ್ಕಾರ ಬಿಟ್ಟ ಉಚಿತ ಬಸ್​ನಲ್ಲಿ ಮಹಿಳೆಯರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಇದರಲ್ಲಿ ಸಂಚರಿಸುವ ಮಹಿಳಾ ಮಣಿಗಳು ಬ್ರೇಕ್ ಡ್ಯಾನ್ಸ್ ಕೂಡ ಮಾಡಬಹುದು, ಅದು ಅವರು ಇಚ್ಛಿಸಿದ್ದರೆ. ಇದ್ಯಾವುದಕ್ಕೂ ಬಿಆರ್​ಎಸ್​ ಆಕ್ಷೇಪಣೆ ಇಲ್ಲ. ಬಸ್​ನಲ್ಲಿ ಸೀಟು ಪಡೆಯಲು ಪರಸ್ಪರ ಜಟಾಪಟಿ ನಡೆಸುತ್ತಾರೆ. ನಮ್ಮ ತಂದೆ ಕೆ. ಚಂದ್ರಶೇಖರ್ ರಾವ್​ ಅವರು ಸಿಎಂ ಆಗಿದ್ದಾಗ ಇಂತಹ ಘಟನೆಗಳು ನಡೆದಿರಲಿಲ್ಲ. ಆದ್ರೆ, ಫ್ರೀ ಆದಮೇಲೆ ಹೀಗಾಗಿದೆ ಎಂದು ಲೇವಡಿ ಮಾಡಿದರು.

ಕೆಟಿಆರ್​ ಹೇಳಿಕೆ ವೈರಲ್​ ಆಗ್ತಿದ್ದಂತೆ ವ್ಯಾಪಕ ಆಕ್ರೋಶ ಹೊರಹಾಕಿದ ಮಹಿಳೆಯರು, ಈ ಕೂಡಲೇ ಬಿಆರ್​ಎಸ್​ ಪಕ್ಷದ ಅಧ್ಯಕ್ಷರು ತಮ್ಮ ನಾಲಿಗೆಯನ್ನು ಹರಿಬಿಟ್ಟದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ತೆಲಂಗಾಣ ಮಹಿಳಾ ಆಯೋಗವು ಕಿಡಿಕಾರಿದ್ದು, ನಿಮ್ಮ ಹೇಳಿಕೆಗಳಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ತಕ್ಷಣವೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿತ್ತು. ಮಹಿಳೆಯರನ್ನು ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯಿಂದ ನಿಮ್ಮೆಲ್ಲರ ಮನಸ್ಸಿಗೆ ಘಾಸಿಯಾದ ಕಾರಣ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net