

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಯಲ್ಲಿನ ಚಾಲಕರ ಕೊರತೆ ನಿವಾರಿಸಲು ಖಾಸಗಿ ಏಜೆನ್ಸಿ ಮೂಲಕ ಚಾಲಕರ ನೇಮಿಸಲು ನಿಗಮ ಮುಂದಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ೪ ನಿಗಮಗಳಲ್ಲಿ ೧೬ ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಕೊರತೆಯಿದೆ. ಚಾಲಕ, ನಿರ್ವಾಹಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿದ್ದು, ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ೧೩ ಸಾವಿರ ಸಿಬ್ಬಂದಿ ನೇಮಕಕ್ಕೆ ನಾಲ್ಕೂ ನಿಗಮಗಳ ಮಂಡಳಿ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಅದರಂತೆ ಇದೀಗ ಸಿಬ್ಬಂದಿ ನೇಮಕಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಪ್ರಸ್ತಾವನೆ ಸಲ್ಲಿಕೆ, ಸರ್ಕಾರದಿಂದ ಪರಿಶೀಲನೆ, ಅನುಮೋದನೆ, ನಂತರ ಸಿಬ್ಬಂದಿ ಅರ್ಜಿ ಸಲ್ಲಿಕೆ, ಆಯ್ಕೆ ಸೇರಿ ಹಲವು ಪ್ರಕ್ರಿಯೆಗಳು ನಡೆಸಲಾಗುತ್ತದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡು ಸಿಬ್ಬಂದಿ ನೇಮಕವಾಗಲು ಕನಿಷ್ಠ ಒಂದು ವರ್ಷ ಬೇಕಾಗಲಿದೆ. ಅಲ್ಲಿಯವರೆಗೆ ಕೆಎಸ್‌ಆರ್‌ಟಿಸಿಯಲ್ಲಿನ ಚಾಲಕರ ಕೊರತೆ ನೀಗಿಸಲು ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನು ನೇಮಿಸಲು ನಿರ್ಧರಿಸಲಾಗಿದೆ.
ಕೆಎಸ್ಸಾರ್ಟಿಸಿ ನಿರ್ಧರಿಸುವಂತೆ ಟೆಂಡರ್ ಕರೆದು ಚಾಲಕರನ್ನು ಪೂರೈಸುವ ಖಾಸಗಿ ಏಜೆನ್ಸಿ ನೇಮಿಸಲಾಗುತ್ತದೆ. ಆ ಏಜೆನ್ಸಿ ಕಳುಹಿಸುವ ಎಲ್ಲ ಚಾಲಕರನ್ನು ಕೆಲಸಕ್ಕೆ ನೇಮಿಸದೆ, ಅವರ ಚಾಲನಾ ಸಾಮರ್ಥ್ಯ ಸೇರಿ ವಿವಿಧ ವಿಷಯಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ. ಒಟ್ಟು ೫೦೦ ಮಂದಿ ಖಾಸಗಿ ಚಾಲಕರನ್ನು ೧೧ ತಿಂಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಆಯ್ಕೆಯಾಗುವ ಚಾಲಕರಿಗೆ ಕೆಎಸ್ಸಾರ್ಟಿಸಿಯಿಂದಲೇ ಕನಿಷ್ಠ ಒಂದರಿಂದ ಎರಡು ತಿಂಗಳು ತರಬೇತಿ ನೀಡಲಾಗುತ್ತದೆ. ಅದಾದ ನಂತರವಷ್ಟೇ ಅವರನ್ನು ಬಸ್ ಚಾಲನೆಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.