

Bus Ticket Hike: ರಾಜ್ಯದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಬಸ್ಗಳ ಟಿಕೆಟ್ ದರಗಳನ್ನು ದಿಢೀರ್ 15% ಏರಿಕೆ ಮಾಡಿರುವ ರಾಜ್ಯ ಸರ್ಕಾರ, ಭಾನುವಾರ (ಜ.04) ರಾತ್ರಿಯಿಂದಲೇ ಹೊಸ ಪರಿಷ್ಕೃತ ದರವನ್ನು ಜಾರಿಗೊಳಿಸಿದೆ. ಬಸ್ ಪ್ರಯಾಣ ಹಿಂದಿನಕ್ಕಿಂತ ಬಲು ದುಬಾರಿಯಾಗಿದ್ದೇ ತಡ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರಿನಿಂದ ಹಲವು ಜಿಲ್ಲೆಗಳಿಗೆ ಸೇರಿದಂತೆ ತಮ್ಮ ದಿನನಿತ್ಯದ ಕೆಲಸಕ್ಕೆ ನಗರ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಬೆಳೆಸುವ ಜನರಿಗೆ ಇದೀಗ ಬಸ್ ದರ ಏರಿಕೆ ಬಿಸಿ ತಟ್ಟಿದೆ. ಶೇ.15ರಷ್ಟು ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ, ಹೊಸ ಪರಿಷ್ಕೃತ ದರ ಪಟ್ಟಿಯಲ್ಲಿ ಯಾವ್ಯಾವ ಜಿಲ್ಲೆಗಳಿಗೆ ಎಷ್ಟು ಬದಲಾವಣೆ ಆಗಿದೆ ಎಂಬುದನ್ನು ಉಲ್ಲೇಖಿಸಿದೆ. ಇಂದು ಬೆಳಗ್ಗಿನಿಂದಲೇ ದರ ಏರಿಕೆ ಬಿಸಿ ಪ್ರಯಾಣಿಕರನ್ನು ತಟ್ಟಿದ್ದು, ನಿರ್ವಾಹಕರು ಮತ್ತು ಪ್ರಯಾಣಿಕರ ಮಧ್ಯೆ ಚಿಲ್ಲರೆ ಸಮಸ್ಯೆ ಕಾಡಲಾರಂಭಿಸಿದೆ.
ಈ ಹಿಂದೆ 10, 20 ರೂ. ಇದ್ದ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಈಗ 3 ರೂ. ಹೆಚ್ಚಳ ಕಂಡುಬಂದಿದ್ದು, 20ರಿಂದ 23 ಮತ್ತು 25ರಿಂದ 28 ರೂ. ಬದಲಾಗಿದೆ. ಇದರಿಂದ ನಿರ್ವಾಹಕರು ಮತ್ತು ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ದೊಡ್ಡ ತಲೆ ನೋವಾಗಿ ಕಾಡಲಾರಂಭಿಸಿದೆ. ಒಂದೆಡೆ ನಗರ ಸಾರಿಗೆಗಳಲ್ಲಿ ಈ ಸಮಸ್ಯೆ ಎದುರಾದರೆ, ದೂರ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ಮತ್ತಷ್ಟು ಕೆರಳಿಸಿದೆ.