ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ವಾಹನ ಸವಾರ ಸಾವು

accident
Published on

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ನಾಗಸಂದ್ರ ನಿವಾಸಿ ರಾಜೇಂದ್ರ(೫೪) ಮೃತ ಸವಾರ. ಯಶವಂತಪುರ ಮೆಟ್ರೋ ರೈಲ್ದಾಣದ ಬಳಿ ಸೋಮವಾರ ಬೆಳಗ್ಗೆ ೧೦.೩೦ರ ಸುಮಾರಿಗೆ ಈ ಘಟನೆ ನಡೆದಿದೆ.

ಮೃತ ನಾಗೇಂದ್ರ ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿ ಕೆಲಸದ ನಿಮಿತ್ತ ಮೇಖ್ರಿ ವೃತ್ತದ ಜಿಎಸ್‌ಟಿ ಕಚೇರಿಗೆ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಕೆಳರಸ್ತೆಯಲ್ಲಿ ತೆರಳುವಾಗ ಎಡಭಾಗದಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ದ್ವಿಚಕ್ರ ವಾಹನದ ಕನ್ನಡಿಗೆ ತಾಕಿದೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಾಜೇಂದ್ರ ರಸ್ತೆಗೆ ಬಿದ್ದಿದ್ದಾರೆ. ಆಗ ಬಸ್‌ನ ಎಡಭಾಗದ ಚಕ್ರ ಬಳಿ ಸುಲುಕಿದ ರಾಜೇಂದ್ರನನ್ನು ಸುಮಾರು ೨೫ ಅಡಿಗಳಷ್ಟು ಬಸ್ ಎಳೆದುಕೊಂಡು ಮುಂದೆ ಸಾಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net