

ಬೆಂಗಳೂರು: 'ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಕಿಟಕಿ ಮೂಲಕ ಬಸ್ ಹತ್ತುವಾಗ ಮಹಿಳೆಯೊಬ್ಬರ ಕೈ ಕತ್ತರಿಸಲ್ಪಟ್ಟಿದೆ' ಎಂದು ಬಿಂಬಿಸಿರುವ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ನರಸೀಪುರ–ನಂಜನಗೂಡು ಮುಖ್ಯ ರಸ್ತೆಯ ಬಸವನಪುರ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರ ಕೈಗಳು ತುಂಡಾಗಿವೆ ಎಂದು ತಿಳಿಸಿದೆ.
ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಸೇತುವೆ ಬಳಿಕ ಕೆಸ್ಆರ್ಟಿಸಿ ಬಸ್ ಹಾಗೂ ಮಿನಿ ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿ, ಮೂವರು ಗಾಯಗೊಂಡಿದ್ದರು. ಈ ಮೂವರು ನಂಜನಗೂಡಿನಿಂದ ತಿ.ನರಸೀಪುರ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ನಲ್ಲಿ ಮುಂದೆ ಕುಳಿತಿದ್ದರು. ಬಸ್ಸು ತಾಲೂಕಿನ ಬಸವನಪುರ ಗ್ರಾಮದ ಸೇತುವೆ ಬಳಿ ಬರುತ್ತಿದ್ದಂತೆ, ಎದುರಿನಿಂದ ಬಂದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗದಲ್ಲಿದ್ದ ರಾಜಮ್ಮ ಹಾಗೂ ಶಾಂತಕುಮಾರಿ ಎಂಬ ಮಹಿಳೆಯರ ಕೈ ಕತ್ತರಿಸಲ್ಪಟ್ಟಿದೆ.
ಶಕ್ತಿ ಯೋಜನೆ ಲಾಭ ಪಡೆದುಕೊಂಡಿರುವ ಮಹಿಳೆಯರು ರಾಜ್ಯಾದ್ಯಂತ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಮಹಿಳೆಯಲ್ಲಿ ಬಸ್ಸಿನಲ್ಲಿ ವಾಗ್ವಾದ ನಡೆಸುತ್ತಿರುವುದು, ಕಿಟಿಕಿ ಮೂಲಕ ಬಸ್ ಹತ್ತುತ್ತಿರುವುದು, ಸೀಟಿಗಾಗಿ ಗಲಾಟೆ ಮಾಡುತ್ತಿರುವುದು ಇತ್ಯಾದಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಉಚಿತ ಬಸ್ ವಿಚಾರದಲ್ಲಿ ಕೆಲವೆಡೆ ನಡೆದಿರುವ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಇದೀಗ ಇದನ್ನೇ ಲಾಭ ಮಾಡಿಕೊಂಡಿರುವ ಕೆಲವು ಮಂದಿ ಅಪಘಾತದಿಂದ ಕೈ ಕತ್ತರಿಸಲ್ಪಟ್ಟ ಮಹಿಳೆ ನರಳಾಡುತ್ತಿರುವ ದೃಶ್ಯವನ್ನು ಸೆರೆಹಿಡಿದು, 'ಕಿಟಕಿ ಮೂಲಕ ಬಸ್ ಹತ್ತಲು ಹೋಗಿ ಕೈ ಕತ್ತರಿಸಿಕೊಂಡ ಮಹಿಳೆ' ಎಂಬರ್ಥದಲ್ಲಿ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಸದ್ಯ ಈ ಅಪಪ್ರಚಾರಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ ಕೊಟ್ಟಿದ್ದು, ಗೊಂದಲ ಬಗೆ ಹರಿದಿದೆ.
ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ. ಲಾರಿ ಚಾಲಕನ ವಿರುದ್ದ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಅಪಘಾತದಲ್ಲಿ ಸಂಸ್ಥೆಯ ಚಾಲಕರ ತಪ್ಪಿರುವುದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಘಟನೆ ಇದಾಗಿರುವುದಿಲ್ಲ ಎಂದು ತಿಳಿಸಿದೆ.