ಒಡೆಯುತ್ತಿದೆ ಕ್ಷೀರಭಾಗ್ಯ ಹಾಲು

klr milk powder
ಹಾಲಿನ ಪೌಡರ್​ ಪಾಕೇಟ್​
Published on

ಕೋಲಾರ: ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಪೂರೈಕೆಯಾಗಿರುವ ಹಾಲಿನ ಪುಡಿಯನ್ನು ಕಾಯಿಸುವಾಗ ಒಡೆದು ಹೋಗುತ್ತಿದ್ದು ಶಿಕ್ಷಕರ ತಲೆಬಿಸಿ ಹೆಚ್ಚಿಸಿದೆ.

ಯೋಜನೆಯಡಿ ಬಂಗಾರಪೇಟೆ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕಿನ ವಿವಿಧ ಶಾಲೆಗಳಿಗೆ ಪೂರೈಸಲಾಗಿದ್ದ ಆರ್​.ಎಚ್​-29 ಬ್ಯಾಚ್​ನ ಹಾಲಿನ ಪುಡಿ 3 ದಿನಗಳಿಂದ ಹಾಲು ಕಾಯಿಸುವಾಗ ಒಡೆದು ಹೋಗುತ್ತಿದೆ. ಇದರಿಂದ ಮಕ್ಕಳಿಗೆ ಹಾಲು ವಿತರಣೆಯಲ್ಲಿ ವ್ಯತ್ಯಯವಾಗಿದೆ.

ಈ ಕುರಿತು ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯ ನಿರ್ದೇಶಕರಿಗೆ ದೂರು ನೀಡಿದ್ದ ಮೇರೆಗೆ ಒಡೆದ ಹಾಲನ್ನು ಮಕ್ಕಳಿಗೆ ನೀಡಬಾರದೆಂದು ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಜತೆಗೆ ಈಗಾಗಲೇ ಪೂರೈಕೆ ಆಗಿರುವ ಹಾಲಿನ ಪುಡಿಯನ್ನು ವಾಪಸ್​ ಕಳಿಸುವಂತೆ ತಿಳಿಸಿದ್ದಾರೆ.

ಮಾಹಿತಿ ನೀಡಲು ತಾಕೀತು

ಮುಳಬಾಗಿಲು ತಾಲೂಕಿನ ಬೆಳಗಾನಹಳ್ಳಿ, ಮಂಚಿಗಾನಹಳ್ಳಿ, ಗುಮ್ಮಳಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುತ್ಯಾಲಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಎಮ್ಮೆನತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ವಿವಿಧ ಶಾಲೆಗಳ ಮುಖ್ಯಶಿಕ್ಷಕರು ದೂರು ನೀಡಿದ್ದರು. ಇದಕ್ಕೆ ಮುಳಬಾಗಿಲು ತಾಪಂ ಕಾರ್ಯಾಲಯದ ಪಿಎಂ ಪೋಷಣ್​ ಶಕ್ತಿ ನಿರ್ಮಾಣ್​ ಯೋಜನೆಯ ಸಹಾಯಕ ನಿರ್ದೇಶಕರು, ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಜ್ಞಾಪನ ಪತ್ರ ಬರೆದು ಆರ್​ಎಚ್​&29 ಬ್ಯಾಚ್​ ಸಂಖ್ಯೆಯ ಹಾಲಿನ ಪುಡಿಯು ಎಷ್ಟು ಸರಬರಾಜು ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಸಮಸ್ಯೆಯಾಗಿಲ್ಲ

ಕ್ಷೀರಭಾಗ್ಯ ಯೋಜನೆಯಡಿ 10 ವರ್ಷಗಳಿಂದ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಈವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅತಿ ಹೆಚ್ಚು ಬಿಸಿ ಮಾಡಿದಾಗ, ಪಾತ್ರೆ ಸ್ವಚ್ಛವಾಗಿಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ. ಆದರೂ ಆ ಬ್ಯಾಚ್​ನ ಹಾಲಿನ ಪುಡಿಯನ್ನು ವಾಪಸ್​ ತರಿಸಿದ್ದು, ಬೇರೆ ಹಾಲಿನ ಪೊಟ್ಟಣ ಕಳುಹಿಸಲಾಗಿದೆ ಎಂದು ಕೋಮುಲ್​ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಕೆಎಂಎಫ್​ಗೆ ಮಾದರಿ ರವಾನೆ

ಆರ್​ಎಚ್​-29 ಬ್ಯಾಚ್​ನ ಹಾಲಿ ಪುಡಿಯನ್ನು ಆ.29ರಂದು ತಯಾರಿಸಲಾಗಿದ್ದು, ಫೆಬ್ರವರಿಯವರೆಗೆ ಬಳಸಲು ಯೋಗ್ಯವಾಗಿದೆ. ಇದನ್ನು ರಾಮನಗರದಿಂದ ಶಾಲೆಗಳಿಗೆ ಪೂರೈಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಎಷ್ಟು ಪ್ರಮಾಣ ಹಾಲಿ ಪುಡಿ ಬೇಕಾಗುತ್ತದೆ ಎಂದು ಪ್ರತಿ 3 ತಿಂಗಳಿಗೊಮ್ಮೆ ಶಾಲಾ ಮುಖ್ಯಶಿಕ್ಷಕರು, ತಾಲೂಕು ಪಂಚಾಯಿತಿ ಮೂಲಕ ಒಕ್ಕೂಟಕ್ಕೆ ಬೇಡಿಕೆ ಪತ್ರ ಕಳುಹಿಸುತ್ತಾರೆ. ಇದಕ್ಕೆ ತಕ್ಕಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಾದಲಿ ಟಕದಿಂದ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಎಚ್​.-29 ಬ್ಯಾಚ್​ನಿಂದ ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರಕ್ಕೆ ಒಟ್ಟು 18,645 ಕೆಜಿ ಹಾಲಿನಪುಡಿ ಪೂರೈಸಲಾಗಿದ್ದು, ಹಾಲು ಒಡೆದು ಹೋಗುತ್ತಿದ್ದರಿಂದ ವಾಪಸ್​ ಕಳುಹಿಸುವಂತೆ ಸೂಚಿಸಲಾಗಿದೆ.

ಕೂಡಲೇ ಒಕ್ಕೂಟದ ಶಿಬಿರ ಕಚೇರಿ ಅಧಿಕಾರಿಗಳು ಕೆಲ ಶಾಲೆಗಳಿಗೆ ತೆರಳಿ ಮಾದರಿ ಸಂಗ್ರಹಿಸಿ ಪರೀಕ್ಷೆ ಒಳಪಡಿಸಿದ್ದಾರೆ. ಜತೆಗೆ ಕೆಎಂಎ್​ಗೂ ಮಾದರಿ ಕಳುಹಿಸಿದ್ದಾರೆ.

ಕೋಟ್​..

ಶಾಲೆಗಳಲ್ಲಿ ಹಾಲಿನ ಪುಡಿ ಕಾಯಿಸುವಾಗ ಒಡೆದು ಹೋಗುತ್ತಿದ್ದ ಬಗ್ಗೆ ಗಮನಕ್ಕೆ ಬಂದಿತ್ತು, ಕೂಡಲೇ ಅಧಿಕಾರಿಗಳನ್ನು ಕಳುಹಿಸಿ ಮಾದರಿ ಸಂಗ್ರಹಿಸಿ ಪರೀಕ್ಷೆ ಒಳಪಡಿಸಲಾಗಿದೆ. ಹಾಗೆಯೇ ಹೊಸ ಪ್ಯಾಕೆಟ್​ ಕಳುಹಿಸಿ ಕೊಡಲಾಗಿದೆ.

- ಗೋಪಾಲಮೂರ್ತಿ, ಎಂಡಿ, ಕೋಮುಲ್​

ಪಟ್ಟಿ...

ದಿನಾಂಕ ತಾಲೂಕು ಬ್ಯಾಗ್​ ಕೆಜಿ

ನ.5 ಬಂಗಾರಪೇಟೆ 180 4,500

ನ.6 ಬಂಗಾರಪೇಟೆ 79 1,985

ನ.7 ಮುಳಬಾಗಿಲು 411 10,275

ನ.11 ಶ್ರೀನಿವಾಸಪುರ 65 1,885

ಒಟ್ಟು 735 18,645

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net