ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತವಾಗಬೇಕಿದೆ ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ: ಈಶ್ವರಪ್ಪ

Yedi Eshu
Published on

ಶಿವಮೊಗ್ಗ: ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದೆ. ಎಲ್ಲಾ ಮೋರ್ಚಾದವರು ನನಗೆ ಕರೆ ಮಾಡಿ ನೀವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹೇಳುತ್ತಿದ್ದಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆ ವಿಫಲವಾದ ಬಳಿಕ ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ನಾನು ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಗುಡುಗಿದ್ದಾರೆ.

ನಾನು ಮೋದಿ ಪರ ಧ್ವನಿ ಎತ್ತುತ್ತೇನೆ. ಆದರೆ ಮೋದಿ ಅವರ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ಇಂದು ಆರಗ ಜ್ಞಾನೇಂದ್ರ ಹಾಗೂ ಕೆಲವರು ನಿವಾಸಕ್ಕೆ ಬಂದಿದ್ದರು. ಆದರೆ ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನನ್ನ ಮಗನಿಗೆ ಟಿಕೆಟ್​ ಕೊಟ್ಟಿಲ್ಲ ಎಂದು ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.

Yediyurappa

ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದೆ. ರಾಜ್ಯಾಧ್ಯಕ್ಷರು ಲಿಂಗಾಯತರೇ ಬೇಕು ಅಂದಿದ್ದರೆ ಯತ್ನಾಳ್​ ಅವರನ್ನು ಮಾಡಬೇಕಿತ್ತು. ಯತ್ನಾಳ್ ಅವ​​ರನ್ನ ಯಾಕೆ ಮಾಡಲಿಲ್ಲ. ಲಿಂಗಾಯತರು ಬೆಳೆಯುವುದು ಇವರಿಗೆ ಇಷ್ಟವಿಲ್ಲ. ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್​ ಅಭಿಯಾನ ನಡೆದರೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿಗೆ ಟಿಕೆಟ್ ಯಾಕೆ​ ಕೊಡಿಸಲಿಲ್ಲ. ಪಕ್ಷವನ್ನ ಯಡಿಯೂರಪ್ಪ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಪಕ್ಷ ಅಂದರೆ ತಾಯಿ, ತಾಯಿಯ ಕತ್ತು ಹಿಸುಕುತ್ತಿದ್ದಾರೆ. ನಾನು ಕೊನೆಯವರೆಗೆ ಪಕ್ಷ ತಾಯಿ ಅಂತಾ ನಂಬಿದ್ದೇನೆ. ಪಕ್ಷ ಸೂಚನೆಯಂತೆ ನಾನು ನಡೆದುಕೊಂಡು ಬಂದಿದ್ದೇನೆ. ಈಗ ನಾನೂ ಸ್ಪರ್ಧೆ ಮಾಡುವ ಉದ್ದೇಶ ಕಪಿಮುಷ್ಠಿಯಿಂದ ಪಕ್ಷ ಹೊರಗೆ ಬರಬೇಕು. ಅಪ್ಪ ಮಕ್ಕಳ ಕೈಗೆ ಸಿಕ್ಕು ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತವಾಗಬೇಕಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net