ಬಲಾಢ್ಯ ದೇಶಕ್ಕೆ ಅನ್ನದಾತರೇ ಬುನಾದಿ: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ

krushi feb 2020
Published on

ಮೈಸೂರು: ಬೀಳು ಬಿದ್ದ ಭೂಮಿಯಲ್ಲೂ ಬೆಳೆ ತೆಗೆಯಬಲ್ಲೆನೆಂಬ ಆತ್ಮವಿಶ್ವಾಸವಿದ್ದರೆ ಸಾಕು. ನೆಚ್ಚಿಕೊಂಡವರನ್ನು ಭೂತಾಯಿ ಎಂದಿಗೂ ಕೈಬಿಡುವುದಿಲ್ಲ. ಬಲಾಢ್ಯ ದೇಶಕ್ಕೆ ಅನ್ನದಾತರೇ ಬುನಾದಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಹುರಿದುಂಬಿಸಿದರು.

3 ದಿನಗಳ ಕೃಷಿ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹತಾಶೆ, ಆತ್ಮಹತ್ಯೆಯಂತಹ ಯೋಚನೆಗಳಿಂದ ರೈತ ಸಮೂಹವನ್ನು ಹೊರತಂದು ಆತ್ಮಸ್ಥೈರ್ಯ ತುಂಬಿ, ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಈ ಮೇಳದ ಉದ್ದೇಶ. 150ಕ್ಕೂ ಹೆಚ್ಚು ಮಳಿಗೆಗಳಿದ್ದು, ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದರು.

ಕೃಷಿ ಉದ್ಯಮವಾದರೆ ವಿಶ್ವವನ್ನೇ ಆಳಬಹುದಾಗಿದ್ದು, ಈ ಮಾತಿಗೆ ಇಸ್ರೇಲ್ ಸಾಧನೆಯೇ ನಿದರ್ಶನ. ಹೆಚ್ಚು ಬಂಜರು ಭೂಮಿ, ಕಡಿಮೆ ಜಲ ಸಂಪತ್ತಿದ್ದಾಗ್ಯೂ ಕೃಷಿ ಮೇಲ್ಪಂಕ್ತಿಯಾಗಿದೆ. ಬೇಸಾಯ, ಬೆಳೆ ಪದ್ಧತಿ ಬದಲಾಯಿಸಿಕೊಂಡು ಯಶಸ್ವಿಯಾದ ರೈತರು ನಮ್ಮಲ್ಲೂ ಸಾಕಷ್ಟಿದ್ದು, ಈ ಕಾರಣಕ್ಕೆ ಹಲವು ಲಕ್ಷ ಸಂಪಾದಿಸುವ ಉದ್ಯೋಗ ತೊರೆದು ಐಟಿ- ಬಿಟಿ ಯುವಕರು ಕೃಷಿಯಲ್ಲಿ ತೊಡಗಿ ಮೊದಲು ಟೀಕಿಸಿದವರಿಂದಲೇ ಪ್ರೋತ್ಸಾಹ ಗಿಟ್ಟಿಸಿಕೊಂಡಿದ್ದಾರೆ ಎಂದು ನಿದರ್ಶನವನ್ನಿತ್ತರು.

ಕಲುಷಿತ ಆಹಾರ ಧಾನ್ಯಗಳಿಂದ ರೋಗ-ರುಜಿನಗಳು ಉಂಟಾಗುತ್ತವೆಂದು ತಿಳಿದ ಜನರು ಜಾಗೃತರಾಗಿದ್ದಾರೆ. ಹೀಗಾಗಿ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳು, ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಸ್ಪರ್ಧಾತ್ಮಕ ಬೆಲೆಯೂ ಸಿಗುವುದರಿಂದ ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಬಳಸಿಕೊಂಡರೆ ನಿರೀಕ್ಷಿತ ಪ್ರಗತಿ ಸಾಧ್ಯವಿದೆ. ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಸಂತ್ರಸ್ತರು ಹಾಗೂ ರೈತರಿಗೆ ಸ್ಪಂದಿಸಿ ಅಗತ್ಯ ನೆರವು ನೀಡಿವೆ ಎಂದು ಡಾ. ಸಂಕೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net