

Krrish 4: ದಶಕಗಳ ಹಿಂದೆಯೇ ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದ ಹೃತಿಕ್ ರೋಷನ್ ಅಭಿನಯದ ಕ್ರಿಶ್ ಸೀಕ್ವೆಲ್ಗಳು, ಸಿನಿಪ್ರೇಕ್ಷಕರ ಕುತೂಹಲ, ಕೌತುಕವನ್ನು ಹೆಚ್ಚಿಸಿತು. ಈ ಚಿತ್ರಗಳ ಜಾನರ್ನ ಇಷ್ಟಪಟ್ಟ ಪ್ರೇಕ್ಷಕ ವರ್ಗ, ಇದರ ಮುಂದಿನ ಭಾಗಗಳಿಗೆ ತೀರ ಕಾತರ ವ್ಯಕ್ತಪಡಿಸಿದ್ದರು. ಆದರೆ, ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಕ್ರಿಶ್ 4 ಸೆಟ್ಟೇರಲು ಸಜ್ಜಾಗಿದ್ದು, ಈ ಚಿತ್ರವನ್ನು ಸ್ವತಃ ಹೃತಿಕ್ ಅವರೇ ನಿರ್ದೇಶಿಸಲಿದ್ದಾರೆ.
ಈ ಹಿಂದೆ ಕ್ರಿಶ್ ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಜತೆಗೆ ತೆರೆ ಹಂಚಿಕೊಂಡಿದ್ದ ಬಹುತೇಕ ಕಲಾವಿದರೇ ಇಲ್ಲಿಯೂ ಇರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಹುನಿರೀಕ್ಷಿತ ಕ್ರಿಶ್ 4 ಸಿನಿಮಾಗಾಗಿ ಬಾಲಿವುಡ್ ಮಂದಿ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಗಳು ಸಿಕ್ಕಿದ್ದು, ಕ್ರಿಶ್ 4 ಮೂಲಕ ಹೃತಿಕ್ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಇದರೊಂದಿಗೆ ಮೂರು ಪಾತ್ರಗಳಲ್ಲಿ ಹೃತಿಕ್ ವಿಶೇಷವಾಗಿ ಅಭಿನಯಿಸಲಿದ್ದಾರೆ.
ವಿಶೇಷ ಎಂದರೆ ಕ್ರಿಶ್ 4 ಟೈಮ್ ಟ್ರಾವೆಲ್ ಕಥೆ ಆಧರಿತ ಚಿತ್ರ ಎನ್ನಲಾಗಿದೆ. ಹೃತಿಕ್ ರೋಷನ್ಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇರಲಿದೆ. ಹಾಲಿವುಡ್ ಸೂಪರ್ ಹೀರೋ ಚಿತ್ರಗಳಿಂದ ಸ್ಫೂರ್ತಿ ಪಡೆದಿರುವ ಚಿತ್ರತಂಡ ಹೊಸತನ್ನು ಪ್ರಯೋಗ ಮಾಡಲು ದಿಟ್ಟ ಹೆಜ್ಜೆಯಿಟ್ಟಿದೆ. ಸದ್ಯ ಚಿತ್ರಕ್ಕಾಗಿ ಬೃಹತ್ ಸೆಟ್ಗಳು, ಕಲಾವಿದರ ಆಯ್ಕೆ ಪ್ರಕ್ರಿಯೆ ಸೇರಿದಂತೆ ಹಲವು ಕೆಲಸಗಳು ಈಗಾಗಲೇ ಶುರುವಾಗಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).