

ಇತಿಹಾಸ: ಕ್ರಿಯಾಯೋಗವನ್ನು ಮಹಾವತಾರ ಬಾಬಾಜಿ ಅವರು ಪುನರುಜ್ಜೀವನಗೊಳಿಸಿದರು ಹಾಗೂ ಶಿಷ್ಯ ಲಾಹಿರಿ ಮಹಾಶಯರಿಗೆ ಕಲಿಸಿದರು. ಲಾಹಿರಿ ಮಹಾಶಯರು ತಮ್ಮ ಶಿಷ್ಯರಾದ ಶ್ರೀಯುಕ್ತೇಶ್ವರಗಿರಿ ಅವರಿಗೆ ಕಲಿಸಿದರು ಮತ್ತು ಅವರು ಅದನ್ನು ಪರಮಹಂಸ ಯೋಗಾನಂದರಿಗೆ ಕಲಿಸಿದರು. ಪರಮಹಂಸ ಯೋಗಾನಂದರು ‘ಒಬ್ಬಯೋಗಿಯ ಆತ್ಮಕಥೆ’ ಎಂಬ ಪುಸ್ತಕದ ಮೂಲಕ ಪಾಶ್ಚಿಮಾತ್ಯ ಜಗತ್ತಿಗೆ ಈ ಪದ್ಧತಿಯನ್ನು ಪರಿಚಯಿಸಿದರು.
ಪ್ರಯೋಜನಗಳು: ದೈಹಿಕ ಆರೋಗ್ಯ: ಇದು ಉಸಿರಾಟವನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆಯನ್ನು ದೈಹಿಕ ಶಕ್ತಿಯಾಗಿಸುತ್ತದೆ. ಆಲಸ್ಯನಿವಾರಿಸಿ ನರಮಂಡಲವನ್ನು ಶಾಂತಗೊಳಿಸುತ್ತದೆ.
ಮಾನಸಿಕ ಆರೋಗ್ಯ: ಇದು ಒತ್ತಡವನ್ನು ಮತ್ತು ಆತಂಕವನ್ನು ಕಡಿಮೆಮಾಡುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತದೆ.
ಆಧ್ಯಾತ್ಮಿಕ ಬೆಳವಣಿಗೆ: ಇದು ಆತ್ಮ ಸಾಕ್ಷಾತ್ಮಕಾರಕ್ಕೆ, ಆಂತರಿಕ ಶಾಂತಿಗೆ, ಆಧ್ಯಾತ್ಮಿಕ ಜಾಗೃತಿಯನ್ನು ಉತ್ತೇಜಿಸುತ್ತದೆ.
1. ಪ್ರಾಣಾಯಾಮ: ಉಸಿರಾಟದ ನಿಯಂತ್ರಣವು ಕ್ರಿಯಾ ಯೋಗದ ಪ್ರಮುಖ ಭಾಗವಾಗಿದೆ. ಇದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಹಾಯಕ.
2.ಮಂತ್ರಗಳು: ಮಂತ್ರಗಳ ಜಪವು ಮನಸ್ಸನ್ನು ಶಾಂತಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಉತ್ತೇಜಿಸುತ್ತದೆ.
3. ಮುದ್ರೆಗಳು: ಪ್ರಾಣಶಕ್ತಿಯ ಹರಿವನ್ನು ನಿಯಂತ್ರಿಸಲು ಮತ್ತು ದೇಹದ ನಿರ್ದಿಷ್ಟ ಭಾಗಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
ಕ್ರಿಯಾಯೋಗದ ಅಭ್ಯಾಸ ಎನ್ನುವುದು ಸಾಧನಾ ಮಾರ್ಗವಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಕಲಿಯುವುದು ಉತ್ತಮ. ಈ ಪದ್ಧತಿಯು ನಿರ್ದಿಷ್ಟ ತಂತ್ರ- ಮಂತ್ರ- ಮುದ್ರೆಗಳನ್ನು ಒಳಗೊಂಡಿರುತ್ತದೆ. ಕ್ರಿಯಾಯೋಗವು ಒಂದು ಆಂತರಿಕ ವಿಜ್ಞಾನವಾಗಿದ್ದು, ಪ್ರಾಣಶಕ್ತಿಯನ್ನು ನಿರ್ದಿಷ್ಟ ರೀತಿಯಲ್ಲಿ ನಿರ್ದೇಶಿಸಿ ಆಧ್ಯಾತ್ಮಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ‘ಕ್ರಿಯಾ’ ಎಂದರೆ ಕ್ರಿಯೆ, ಚಲನೆ ಮತ್ತು ‘ಯೋಗ’ ಎಂದರೆ ಒಕ್ಕೂಟ. ಹೀಗಾಗಿ ಕ್ರಿಯಾಯೋಗವು ಸ್ವಯಂ-ಸಾಕ್ಷಾತ್ಕಾರದ ಕಡೆಗೆ ಮಾರ್ಗದರ್ಶನ ನೀಡುವ ಯೋಗಸಾಧನವಾಗಿದೆ.
ಮಾನವ ಬೆನ್ನುಮೂಳೆಯು ಕೇವಲ ಭೌತಿಕ ರಚನೆಯಲ್ಲ. ಇದು ಆಧ್ಯಾತ್ಮಿಕ ಶಕ್ತಿಯು ಹರಿಯುವ ಮುಖ್ಯನಾಳವಾಗಿದೆ. ಬೆನ್ನುಮೂಳೆಯ ಉದ್ದಕ್ಕೂ ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ, ಮೂಲಾಧಾರ ಎಂಬ ಏಳು ಚಕ್ರಗಳಿವೆ. ಅವು ನಮ್ಮ ಅಸ್ತಿತ್ವದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುವ ಶಕ್ತಿಕೇಂದ್ರಗಳಾಗಿವೆ. ಕ್ರಿಯಾಯೋಗವು ಪ್ರಾಣವನ್ನು ಬೆನ್ನು ಮೂಳೆಯ ಉದ್ದಕ್ಕೂ ಮೇಲಕ್ಕೆ ಮತ್ತು ಕೆಳಕ್ಕೆ ನಿರ್ದೇಶಿಸುತ್ತದೆ. ಈ ಚಕ್ರಗಳನ್ನು ಶುದ್ಧೀಕರಿಸುತ್ತದೆ ಮತ್ತು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಕುಂಡಲಿನಿ ಬೆನ್ನುಮೂಳೆಯ ಮೂಲಕ ಮೇಲೇರಿದಾಗ ಅದು ವಿಸ್ತರಿತ ಪ್ರಜ್ಞೆ ಮತ್ತು ಆಳವಾದ ಆನಂದದ ಭಾವನೆಗೆ ಕಾರಣವಾಗುತ್ತದೆ.
ಕ್ರಿಯಾ ಯೋಗವು ಹಳೆಯ ಕರ್ಮವನ್ನು ವೇಗವಾಗಿ ಸುಟ್ಟುಹಾಕುವ ಮತ್ತು ಆಳವಾದ ಪ್ರಜೆಯ ಸ್ಥಿತಿಗಳನ್ನು ತೆರೆಯುವ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಸಂವತ್ಸರದ ಪ್ರಾಮಾಣಿಕ ಕ್ರಿಯಾ ಅಭ್ಯಾಸವು ಸಾಮಾನ್ಯ ವ್ಯಕ್ತಿಯು ದಶಕಗಳಲ್ಲಿ ಸಾಧಿಸುವ ಆಧ್ಯಾತ್ಮಿಕ ಬೆಳವಣಿಗೆಗೆ ಸಮನಾಗಿರುತ್ತದೆ ಎಂದು ಹೇಳಲಾಗಿದೆ.
ಪೂರ್ವ ಸಿದ್ಧತೆ: ಕ್ರಿಯಾ ಯೋಗದ ಅಭ್ಯಾಸಕ್ಕೆ ಮೊದಲು ದೇಹವನ್ನು ಶುದ್ಧೀಕರಿಸುವುದು ಮತ್ತು ಮನಸ್ಸನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ. ತಾಜಾಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀಜಗಳು, ಸಾತ್ವಿಕ ಆಹಾರಗಳಾದ ಹಾಲು- ಜೇನುತುಪ್ಪ- ತುಪ್ಪವನ್ನು ಸೇವಿಸುವುದು ಉತ್ತಮ. ಅತಿಯಾಗಿ ಸಂಸ್ಕರಿಸಿದ ಆಹಾರಗಳು, ಕೆಫೀನ್, ಸಕ್ಕರೆ, ಮಾಂಸ ಮದ್ಯ ಮತ್ತು ಧೂಮಪಾನವನ್ನು ತಪ್ಪಿಸಬೇಕು. ಕ್ರಿಯಾಯೋಗವು ನಿರಂತರ ಅಭ್ಯಾಸ ಮತ್ತು ಗುರುಗಳ ಅನುಗ್ರಹಪೂರ್ಣ ಮಾರ್ಗದರ್ಶನದಿಂದ ಶೀಘ್ರ ಪ್ರಗತಿಯನ್ನು ನೀಡುತ್ತದೆ.
ಕ್ರಿಯಾ ಯೋಗವು ನಮ್ಮ ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ಇದೊಂದು ಪವಿತ್ರ ಸಾಧನಾ ಮಾರ್ಗ. ಜೀವನ ವಿಧಾನ. ಈ ಮಾರ್ಗದಲ್ಲಿ ನಡೆಯುವಾಗ ನಾವು ನಮ್ಮನ್ನು ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಗೌರವಿಸಬೇಕು. ನಾವು ನಮ್ಮ ದೇಹ- ಮನಸ್ಸು- ಆತ್ಮವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಎಲ್ಲರೊಂದಿಗೆ ಪ್ರೀತಿ ಸಹಾನುಭೂತಿಯಿಂದ ವರ್ತಿಸಬೇಕು. ಈ ಪವಿತ್ರ ಮಾರ್ಗದಲ್ಲಿ ನಡೆಯುವ ಮೂಲಕ, ನಾವು ನಮ್ಮ ಜೀವನವನ್ನು ಉನ್ನತ ಪ್ರಜ್ಞೆಯ ಕಡೆಗೆ ಕರೆದೊಯ್ಯಬಹುದು.