ಕೃತಿಗೆ ಡಬಲ್ ಧಮಾಕಾ! : ಒಂದೇ ದಿನ ನಟಿಯ ಎರಡು ಸಿನಿಮಾಗಳಿಗೆ ಮುಹೂರ್ತ

ಕೃತಿ ಶೆಟ್ಟಿ
ಕೃತಿ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ತೆಲುಗು, ತಮಿಳಿನ ತಲಾ ಒಂದು ಸಿನಿಮಾಗೆ ಮುಹೂರ್ತ
  • ಗುರುವಾರವೇ ಎರಡು ಸಿನಿಮಾಗಳಿಗೆ ಚಾಲನೆ
  • ಉಪ್ಪೇನಾ ನಟಿ ಭರ್ಜರಿ ಖುಷಿ ತಂದ ಗುರುವಾರ
ಸಿನಿಮಾ ನಟ-ನಟಿಯರ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದು ಅಥವಾ ಮುಹೂರ್ತ ಕಾಣುವುದು ತೀರಾ ವಿರಳ. ಆದರೆ, ‘ಉಪ್ಪೇನಾ’ ಖ್ಯಾತಿಯ ಬಹುಭಾಷಾ ತಾರೆ ಕೃತಿ ಶೆಟ್ಟಿಗೆ ಈ ಗುರುವಾರ ಡಬಲ್ ಧಮಾಕಾ. ಯಾಕೆಂದರೆ, ನಟಿಯ ಎರಡು ಸಿನಿಮಾಗಳು ಒಂದೇ ದಿನ ಮುಹೂರ್ತ ಕಂಡಿವೆ. ಬೆಳಗ್ಗೆ ತೆಲುಗು ಸಿನಿಮಾ ಮುಹೂರ್ತ ಕಂಡರೆ, ಬಳಿಕ ತಮಿಳು ಚಿತ್ರ ಸೆಟ್ಟೇರಿದೆ. ಆ ಮೂಲಕ ಕೃತಿ ಗುರುವಾರ ಡಬಲ್ ಸಂಭ್ರಮಪಟ್ಟಿದ್ದಾರೆ. ‘ಸಂಕ್ರಾಂತಿಕಿ ವಸ್ತುನ್ನಾಂ’ ಬಳಿಕ ಅನಿಲ್ ರವಿಪುಡಿ ಮತ್ತು ವಿಕ್ಟರಿ ವೆಂಕಟೇಶ್ ಮತ್ತೆ ಒಂದಾಗಿದ್ದಾರೆ. ಈ ಕಾಂಬಿನೇಷನ್ ಐದನೇ ಬಾರಿಗೆ ಒಂದಾಗುತ್ತಿದ್ದು, ಗುರುವಾರ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಈ ಚಿತ್ರದಲ್ಲಿ ವೆಂಕಿ ಜತೆಗೆ ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಕಲಾಬಳಗದಲ್ಲಿದ್ದಾರೆ. ಇನ್ನು, ಈ ಸಿನಿಮಾ ಮುಹೂರ್ತ ನೆರವೇರಿದ ಬಳಿಕ ಕೃತಿ ತಮಿಳು ಚಿತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ಪುತ್ರ ಅರ್ಜಿತ್ ಶಂಕರ್ ಇದೀಗ ‘ಲವರ್ ಬಾಯ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇಲ್ಲಿ ಅವರಿಗೆ ಕೃತಿ ಶೆಟ್ಟಿ ಜೋಡಿಯಾಗಿದ್ದಾರೆ. ನಿರ್ದೇಶಕ ಆಟ್ಲೀ ಗರಡಿಯಲ್ಲಿ ಪಳಗಿರುವ ಅಶೋಕ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಕೈಜೋಡಿಸಿದೆ. ಈ ಎರಡು ಸಿನಿಮಾಗಳ ಜತೆಗೆ ಕೃತಿ ಸದ್ಯ ತಮಿಳಿನ ‘ಜೆನಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net