

ಶಿವಮೊಗ್ಗ: ಶಿವಮೊಗ್ಗದ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣಾ ಸಮಿತಿಯಿಂದ ಕೃಷ್ಣಮೂರ್ತಿ ಅವರ ಸಂಸ್ಮರಣಾ ಕೃತಿ ‘ಕೃಷ್ಣಸ್ಮತಿ’ ಬಿಡುಗಡೆ ಸಮಾರಂಭವನ್ನು ಮೇ 17ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕ ಎ.ಜೆ.ರಾಮಚಂದ್ರ ಹೇಳಿದರು.
ಹಿರಿಯೂರು ಕೃಷ್ಣಮೂರ್ತಿ ಅವರದು ಹೇಳಿ ಮುಗಿಸಲಾಗದ ವ್ಯಕ್ತಿತ್ವ. ಅಂತಹ ಅಪರೂಪದ ಸಂಘಟಕರ ನೆನಪುಗಳನ್ನು ಚಿರವಾಗಿಸಲು ಅವರೊಂದಿಗೆ ಒಡನಾಟವಿದ್ದ ಅನೇಕರು ಬರೆದ ಲೇಖನಗಳನ್ನು ಒಳಗೊಂಡ ಸಂಸ್ಮರಣಾ ಕೃತಿಯನ್ನು ಆರ್‌ಎಸ್‌ಎಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬಿಡುಗಡೆ ಮಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯೂರು ಕೃಷ್ಣಮೂರ್ತಿ ಅವರೊಂದಿಗೆ ಕೆಲಸ ಮಾಡಿದ ಮಾಡಿದ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ವಿ.ಕೃಷ್ಣ ಭಟ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಟಿ.ಪಟ್ಟಾಭಿರಾಮ, ಕೃಷ್ಣಮೂರ್ತಿ ಅವರ ಪತ್ನಿ ಉಮಾ ಭಾಗವಹಿಸುವರು ಎಂದರು.
ಹಿರಿಯೂರು ಕೃಷ್ಣಮೂರ್ತಿ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಆರ್‌ಎಸ್‌ಎಸ್ ಹಾಗೂ ಪರಿವಾರದ ಇತರ ಅಂಗಸಂಸ್ಥೆಗಳ ಬೆಳವಣಿಗೆ, ಬಲಪಡಿಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಸಂಘದ ವಿಭಾಗ ಕಾರ್ಯವಾಹರಾಗಿ ನಿರಂತರ ಪ್ರವಾಸ, ವೈಯಕ್ತಿಕ ಸಂಪರ್ಕ ಹಾಗೂ ಸ್ನೇಹಮಯಿ ಸಂಬಂಧಗಳಿಂದ ಪರಿವಾರವನ್ನು ಸಮಗ್ರ ಮತ್ತು ಶಕ್ತಿಯುತವಾಗಿ ನಿರ್ಮಿಸಿದ ಶ್ರೇಯಸ್ಸು ಅವರಿಗೆ ಸಲ್ಲಿಸುತ್ತದೆ ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಗಿರೀಶ್ ಪಟೇಲ್, ಕೆ.ಸಿ.ನಟರಾಜ್ ಭಾಗವತ್, ದೀನದಯಾಳ್, ಸಚ್ಚಿದಾನಂದ ಸುದ್ದಿಗೋಷ್ಠಿಯಲ್ಲಿದ್ದರು.