

ಕಂಸನ ಬಂಧನದಲ್ಲಿದ್ದ ತನ್ನ ತಂದೆ ತಾಯಿಗಳನ್ನು ಶ್ರೀಕೃಷ್ಣ ಈಗ ಬಂಧಮುಕ್ತಗೊಳಿಸಿದ್ದಾನೆ. ಸವೋತ್ತಮನಾದ ನಾನು ಇವರನ್ನು ಬಿಡಿಸುವಾಗ ಕೇವಲ ಈ ಕಬ್ಬಿಣದ ಸರಪಳಿಯಿಂದ ಬಿಡಿಸಿದರೆ ನಾನು ಬಿಡಿಸಿದ್ದು ಅಂತಹ ಮಹತ್ತರ ಕೆಲಸವೇನೂ ಆಗುವುದಿಲ್ಲ. ಹಾಗಾದರೆ ಇವರನ್ನು ಕೇವಲ ಈ ಸರಪಳಿಯಿಂದ ಬಿಡಿಸುವುದಲ್ಲ, ಇವರಿಗೆ ಸಂಸಾರದೊಳಗೆ ಅತಿಯಾದ ಮೋಹ ಇದೆ, ಅದನ್ನೂ ಬಿಡಿಸಿ ಇವರಿಗೆ ಮೋಕ್ಷವನ್ನೇ ಕೊಡಬೇಕು ಎಂದುಕೊಂಡ. ಅದೇ ಕಾರಣಕ್ಕೆ ತನ್ನ ತತ್ವವನ್ನೇ ಉಪದೇಶ ಮಾಡುತ್ತಿದ್ದಾನೆ.
ನಾನೇ ತಂದೆ, ನಾನೇ ತಾಯಿ, ನಾನೇ ಗುರು, ನಾನೇ ಸರ್ವಸ್ವ. ನನ್ನನ್ನು ಮರೆಯಬೇಡಿ. ಕೇವಲ ನಾನು ನಿಮ್ಮ ಮಗ ಎಂದು ಭಾವಿಸಬೇಡಿ ಎನ್ನುವ ಒಳಗಿನ ಆಕೂತವನ್ನು ಶ್ರೀಕೃಷ್ಣಪರಮಾತ್ಮ ಆ ರೀತಿಯಲ್ಲಿ ಅವರಿಗೆ ಉಪದೇಶ ಮಾಡಿದ. ಅವರು ಅದನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೂ ಭಗವಂತನ ಮಾಯೆಯಿಂದ ಮತ್ತೆ ಅವರಿಗೆ ಎಲ್ಲವೂ ಮರೆತು ಹೋಗಿದೆ. ಕೃಷ್ಣ ನಮ್ಮ ಮಗ ಎಂದು ತಿಳಿಯುತ್ತಾರೆ. ತಿಳಿದು ತೊಡೆಯ ಮೇಲೆ ಕೂಡಿಸಿಕೊಂಡು ಆಲಿಂಗನ ಮಾಡಿಕೊಂಡು ಆನಂದ ಭಾಷಗಳನ್ನು ಸುರಿಸುತ್ತಿದ್ದಾರೆ. ಏನೂ ಮಾತನಾಡಲಿಲ್ಲ. ಕೇವಲ ಭಗವಂತ ಮಾತುಗಳನ್ನು ಕೇಳಿದ್ದಾರೆ.
ಕಂಸನನ್ನು ಸಾಯಿಸಿದ ಕೃಷ್ಣ ತಾನು ಆ ರಾಜ್ಯದ ರಾಜನಾಗಲು ಬಯಸಲಿಲ್ಲ. ಬದಲಿಗೆ ಉಗ್ರಸೇನನಿಗೆ ಹೀಗೆ ಹೇಳುತ್ತಾನೆ: ನಾನು ರಾಜನಾಗುವುದಿಲ್ಲ. ನಾನು ರಾಜನಾಗಬೇಕೆಂದರೆ ಯಾರನ್ನೂ ಕೊಲ್ಲಬೇಕಾಗಿಲ್ಲ. ಕಂಸ ನಿನ್ನ ರಾಜ್ಯವನ್ನು ಕಸಿದುಕೊಂಡು ನಿನ್ನನ್ನು ಹೊರಗೆ ಹಾಕಿ ಕಾರಾಗೃಹದ ಒಳಗೆ ಇಟ್ಟು ತಾನು ರಾಜನಾಗಿದ್ದ. ಅದಕ್ಕೆ ಈ ರಾಜ್ಯಕ್ಕೆ ನೀನು ರಾಜನಾಗಬೇಕು. ಹಿಂದೆ ನಮ್ಮ ವಂಶದಲ್ಲಿ ಯದು ಎಂಬ ಒಬ್ಬ ರಾಜನಾಗಿ ಹೋದ. ಆ ಯದು ವಂಶದಲ್ಲಿ ಹುಟ್ಟಿದವರಿಗೆ ರಾಜ್ಯ ಸಿಗದೇ ಹೋಗಲಿ ಎಂದು ಯಯಾತಿಯ ಶಾಪ ಇದೆ. ಕುರು ವಂಶದಲ್ಲಿ ಹುಟ್ಟಿದವರೇ ರಾಜರಾಗಬೇಕು. ಆದ್ದರಿಂದ ನಾನು ರಾಜ್ಯವನ್ನು ಸ್ವೀಕಾರ ಮಾಡುವುದಿಲ್ಲ ಎಂದ.