ಕೃಷ್ಣಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿದ ಕುರಿಗಾಹಿ, 200 ಕುರಿಗಳು

flood-sheep
Published on

ಯಾದಗಿರಿ: ಕೊಡೇಕಲ್ ಸಮೀಪ ಕೃಷ್ಣಾ ನದಿ ಪ್ರವಾಹದಲ್ಲಿ ಕುರಿಗಾಹಿ ಮತ್ತು 200ಕ್ಕೂ ಹೆಚ್ಚು ಕುರಿಗಳು ಸಿಲುಕಿದ್ದು, ಪ್ರಾಣಾಪಾಯದ ಭೀತಿ ಎದುರಾಗಿದೆ.

ಜಂಗಿನಗಡ್ಡಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಗೆಜ್ಜಿಗುಂಡ ಎಂಬ ನಡುಗಡ್ಡೆಯಲ್ಲಿ ಮೇಯಲು ತೆರಳಿದ್ದ 200ಕ್ಕೂ ಹೆಚ್ಚು ಕುರಿಗಳ ಜತೆಗೆ ಕುರಿಗಾಹಿಗಳು ಪ್ರವಾಹದಲ್ಲಿ ಸಿಲುಕಿದ್ದಾರೆ. ಈ ಪೈಕಿ ಓರ್ವ ಕುರಿಗಾಹಿ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಮರಳಿದ್ದು, ಕುರಿಗಳ ಜತೆಗೆ ಮತ್ತೊಬ್ಬ ಕುರಿಗಾಹಿ ನಡುಗಡ್ಡೆಯಲ್ಲೇ ಇದ್ದಾರೆ. ಪ್ರವಾಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ವಾಪಸ್​ ಬರಲು ಆಗುತ್ತಿಲ್ಲ.

ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಳು ಮತ್ತು ಕುರಿಗಾಹಿಯನ್ನು ಸುರಕ್ಷಿತವಾಗಿ ಕರೆತರಲು ತಾಲೂಕಾಡಳಿತ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಗಿನಗಡ್ಡಿ ಸಮೀಪದಲ್ಲೇ ಬೀಡು ಬಿಟ್ಟಿದ್ದಾರೆ. ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಾಗಿರುವ ಕಾರಣ ನಡುಗಡ್ಡೆಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ಬಸವಸಾಗರ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ಪ್ರಮಾಣದ ನೀರಿನ ಒಳ ಹರಿವು ಉಂಟಾಗಿದೆ. ಜಲಾಶಯದ 21 ಮಖ್ಯ ಗೇಟುಗಳನ್ನು ತೆರೆದು 2 ಲಕ್ಷ ಕ್ಯೂಸೆಕ್​ಗೂ ಹೆಚ್ಚು ನೀರನ್ನು ನದಿಗೆ ಹರಿಸಲಾಗುತ್ತಿರುವ ಕಾರಣ ಕೃಷ್ಣೆಗೆ ಭೀಕರ ಪ್ರವಾಹ ಎದುರಾಗಿದೆ. ಇದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣಗೊಂಡಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net