

ಕೋಲಾರ : ಕೆಸಿ ವ್ಯಾಲಿ, ಎಚ್‌ಎನ್ ವ್ಯಾಲಿ, ಎತ್ತಿನಹೊಳೆ ಯೋಜನೆ ಜತೆಗೆ ಪರ‌್ಯಾಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ರಾಮನಗರ ಜಿಲ್ಲೆಗೆ ಕೃಷ್ಣಾನದಿ ನೀರು ಹರಿಸುವ ಆಲೋಚನೆ ಮತ್ತು ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಮುದುವಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಆ.26ರಂದು ಸಿಎಂ ಜತೆ ದೆಹಲಿಗೆ ತೆರಳಿದ್ದಾಗ ನೀರಾವರಿ ಯೋಜನೆಗಳ ಬಗೆಗಿನ ಅನುಭವ, ರಾಜಕೀಯ ಬದ್ಧತೆಯಿಂದ ನಾಲ್ಕು ಜಿಲ್ಲೆಗಳಿಗೆ ಹೊಸ ನೀರಾವರಿ ಯೋಜನೆ ರೂಪಿಸಲು ಮನವಿ ಮಾಡಿದಾಗ ಈ ಬಗ್ಗೆ ಸಿಎಂ ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸಿದ್ದಾರೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಸರ್ಕಾರ ಆಲೋಚಿಸಿದೆ ಎಂದರು.
ಡಿಸೆಂಬರ್‌ಗೆ ಲಸಿಕೆ ಪೂರ್ಣ: ರಾಜ್ಯದಲ್ಲಿ ಈವರೆಗೆ 4.39 ಕೋಟಿ ಲಸಿಕೆ ನೀಡಲಾಗಿದೆ. ಡಿಸೆಂಬರ್ ವೇಳೆಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ 2ನೇ ಡೋಸ್ ಪೂರ್ಣಗೊಳ್ಳಬಹುದು. ಪ್ರತಿದಿನ 5 ಲಕ್ಷ ಲಸಿಕೆ ಗುರಿ ಇಟ್ಟುಕೊಂಡು ಪ್ರತಿ ಬುಧವಾರ 10 ಲಕ್ಷ ಲಸಿಕೆ ನೀಡುವ ಲಸಿಕಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಹೊಸ ಮಾದರಿಯಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುತ್ತಿದೆ. ಈಗ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. ಮುಂಬರುವ ಆರೋಗ್ಯ ಕೇಂದ್ರಗಳನ್ನು 7 ರಿಂದ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. 12 ಹಾಸಿಗೆ ಸಾಮರ್ಥ್ಯ, ಐಸಿಯು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು 3 ವೈದ್ಯರನ್ನು ನೇಮಿಸಲಾಗುವುದು ಎಂದರು.
ಕರೊನಾ ಲಸಿಕೆಯನ್ನು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎನ್ನಲಿ, ಯಾರು ಏನು ಹೇಳಿದರೂ ಜನ ನಂಬಲ್ಲ. 2 ಡೋಸ್ ಪಡೆದರೆ ಕ್ಷೇಮ ಎಂದು ತೀರ್ಮಾನ ಮಾಡಿದ್ದಾರೆ. ಲಸಿಕಾ ಕೇಂದ್ರದ ಮುಂದೆ ಜನರ ಕ್ಯೂ ಮಾತ್ರ ಕಡಿಮೆ ಆಗಲ್ಲ. ಇನ್ನೂ ಕೆಲವರಲ್ಲಿ ಲಸಿಕೆ ಬಗ್ಗೆ ಭಯ ಇದೆ. ಜಿಲ್ಲಾಡಳಿತ, ಗ್ರಾಪಂ ಮಟ್ಟದಲ್ಲಿರುವ ಕಾರ್ಯಪಡೆ ಬಳಸಿಕೊಂಡು ಜನರಿಗೆ ಅರಿವು ಮೂಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದರು.
ವಿಧಾನಸೌಧದ ಮೇಲೆ ಕೆಂಗಲ್ ಹನುಮಂತಯ್ಯ ಅವರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ವಾಕ್ಯ ಬರೆಸಿರುವಂತೆ ಎಲ್ಲ ಸರ್ಕಾರಿ ಆಸ್ಪತ್ರೆ ಮುಂದೆ ಜನರ ಕೆಲಸ ದೇವರ ಕೆಲಸ ಎಂಬ ಘೋಷವಾಕ್ಯ ಬರೆಸಲಾಗುವುದು ಎಂದರು.
ಸಂಸದ ಎಸ್. ಮುನಿಸ್ವಾಮಿ ಮಾತನಾಡಿದರು. ಆರೋಗ್ಯ ಇಲಾಖೆ ನಿರ್ದೇಶಕ ಡಾ.ಅಪ್ಪಾಸಾಹೇಬ್ ಎಸ್.ನರಟ್ಟಿ, ಡಿಸಿ ಡಾ.ಆರ್. ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಎಸ್ಪಿ ಡಿ ಕಿಶೋರ್‌ಬಾಬು, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಡಿಎಚ್‌ಒ ಡಾ. ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮುದುವಾಡಿ ಗ್ರಾಪಂ ಅಧ್ಯಕ್ಷೆ ಎನ್.ನಾಗಮಣಿ ಇತರರಿದ್ದರು.
ಕುಂದುಕೊರತೆಗೆ ಕಚೇರಿ : ಜಿಲ್ಲೆಗೆ ಹೊಸ ರೂಪ ನೀಡಲು ಬದ್ದನಾಗಿ ಹೆಚ್ಚು ಅನುದಾನ, ಅಭಿವೃದ್ಧಿ ಮಾಡುತ್ತೇವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ತಿಂಗಳಾನುಗಟ್ಟಲೆ ಕಚೇರಿ ಸುತ್ತುವ ಪರಿಸ್ಥಿತಿ ತಪ್ಪಿಸಲು ಎಲ್ಲ ತಾಲೂಕುಗಳಲ್ಲೂ ಪಕ್ಷದಿಂದ ಕುಂದುಕೊರತೆ ಕಚೇರಿ ತೆರೆದು ಉಸ್ತುವಾರಿ ಅಧಿಕಾರಿಗಳು ಗೊತ್ತುಪಡಿಸಿದ ದಿನ ಒಂದು ಭಾಗದಲ್ಲಿ ಕುಳಿತು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.