ರಾಜ್ಯಮಟ್ಟದ ಕೃಷಿ ಮೇಳಕ್ಕೆ ಸಾರ್ಥಕತೆಯ ತೆರೆ: ವಿಷಮುಕ್ತ, ಪೌಷ್ಟಿಕಯುಕ್ತ ಆಹಾರಕ್ರಾಂತಿ ಅನಿವಾರ್ಯ

Vijayavani
Published on

ಮೈಸೂರು: ಜ್ಞಾನದ ಶಾಖೆಗಳನ್ನು ವಿಸ್ತರಿಸಿಕೊಂಡರೆ ಕೃಷಿ-ಕೃಷಿಕ ಮೈಕೊಡವಿಕೊಂಡು ಮೇಲೇಳಲು ಒಟ್ಟೂ ಸಾಧ್ಯತೆಗಳನ್ನು ತೆರೆದಿಟ್ಟ, ವಿಪುಲ ಅವಕಾಶಗಳನ್ನು ಮೊಗೆದು ಕೊಟ್ಟ ರಾಜ್ಯಮಟ್ಟದ ಮೂರು ದಿನಗಳ ಕೃಷಿ ಮೇಳಕ್ಕೆ ಭಾನುವಾರ ಸಾರ್ಥಕತೆಯ ತೆರೆಬಿತ್ತು. ‘ಸುಸ್ಥಿರ ಅಭಿವೃದ್ಧಿಯೇ ನಮ್ಮ ಗುರಿ’ ಪರಿಕಲ್ಪನೆಯಡಿ ಆಯೋಜಿಸಿದ ಕರೋನೋತ್ತರ ಕಾಲಘಟ್ಟದ ಪ್ರಮುಖ ವಿದ್ಯಮಾನಕ್ಕೆ ಮಹಾರಾಜ ಕಾಲೇಜು ಮೈದಾನ ಸಾಕ್ಷಿಯಾಯಿತು. ಕರ್ನಾಟಕ ಸರ್ಕಾರ ಸಹಕಾರ, ಮೈಸೂರು ವಿವಿ ಸಹಯೋಗದಲ್ಲಿ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಸಾರಥ್ಯದ ಪರಿಶ್ರಮವು ರೈತರಲ್ಲಿ ಧನ್ಯತಾಭಾವ ಮೆರೆಯುವಂತೆ ಮಾಡಿತು.

ಹಸಿರು ಕ್ರಾಂತಿಯಿಂದ ಆಹಾರಭದ್ರತೆ ಸಾಧಿಸಿದ್ದಾಯಿತು. ಅದಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಸಾಕಷ್ಟು ಕಳೆದುಕೊಂಡಿದ್ದಾಯಿತು. ಇನ್ನೂ ವಿಷಮುಕ್ತ, ಪೌಷ್ಟಿಕಯುಕ್ತ ಆಹಾರಕ್ರಾಂತಿ ಅನಿವಾರ್ಯವೆಂಬ ಸಂದೇಶವನ್ನು ಪುನರುಚ್ಚರಿಸಿತು. ಸ್ವಸ್ಥ ಸಮುದಾಯ, ಸದೃಢ ನಾಡು-ದೇಶ ನಿರ್ವಣಕ್ಕಾಗಿ ಸಾವಯವ ಅಥವಾ ನೈಸರ್ಗಿಕ ತುರ್ತು ಅಗತ್ಯವಾಗಿದೆ. ಉತ್ತಿ ಬಿತ್ತುವ ಮಣ್ಣು, ಗಾಳಿ, ನೀರು, ಪರಿಸರ, ಮನುಷ್ಯನೂ ಸೇರಿ ಸಕಲಜೀವರಾಶಿಗಳ ಸಂರಕ್ಷಣೆ ನಮ್ಮೆಲ್ಲರ ಪರಮ ಕರ್ತವ್ಯವಾಗಬೇಕಿದೆ ಎಂದು ಪ್ರತಿಪಾದಿಸಿತು. ರಾಸಾಯನಿಕ, ಕ್ರಿಮಿನಾಶಕ ಬಳಕೆಬಿಟ್ಟು ಒಮ್ಮಿಂದೊಮ್ಮೆಲೆ ಹಿಂದಿನ ಪದ್ಧತಿ ಅಳವಡಿಕೆ ಅಸಾಧ್ಯ. ಮತ್ತೆ ಆಹಾರ ಕೊರತೆ, ರೈತರಿಗೆ ಹೆಚ್ಚಿನ ನಷ್ಟವೆಂಬ ಕಳವಳವನ್ನು ಕಡೆಗಣಿಸುವಂತಿಲ್ಲ. ಆದರೆ ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು, ಬೇಸಾಯದ ಹೊಸ ಪದ್ಧತಿ, ವೈಜ್ಞಾನಿಕ ವಿಧಾನಗಳಿಂದ ಸಂಭಾವ್ಯ ಆತಂಕ ದೂರ ಮಾಡಲು ಸಾಧ್ಯವಿದೆ ಎಂಬುದನ್ನು ಸಾರಿತು.

ಸುಸ್ಥಿರತೆ ಖಾತ್ರಿ: ಕೃಷಿಗೆ ಪೂರಕವಾಗಿ ಪಶುಪಾಲನೆ, ಮೀನುಗಾರಿಕೆ, ಕೋಳಿ-ಕುರಿ ಸಾಕಣೆ ಇನ್ನಿತರ ಕೃಷಿ ಸಂಬಂಧಿತ ಚಟುವಟಿಕೆಗಳು, ಮಿಶ್ರಬೆಳೆ ಪದ್ಧತಿ, ಸಮಗ್ರ ಕೃಷಿ, ಮಳೆ ನೀರು ಕೊಯ್ಲು, ಅಂತರ್ಜಲವೃದ್ಧಿ, ಆಹಾರ ಸಂಸ್ಕರಣೆ, ಮೌಲ್ಯವರ್ಧನೆ, ರೈತರ ಸ್ವತಃ ಮಾರುಕಟ್ಟೆ ತಂತ್ರಗಳನ್ನು ಅರಿತುಕೊಂಡರೆ ಸುಸ್ಥಿರ ಕೃಷಿ ಸಾಧ್ಯವಿದೆ ಎಂಬ ಆಶಾದಾಯಕ ಭಾವನೆ ಮೂಡಿಸುವಲ್ಲಿ ಮೇಳ ಯಶಸ್ವಿಯಾಯಿತು. ರೈತ ಉತ್ಪಾದಕ ಕಂಪನಿಗಳು, ಸಹಕಾರ ಸಂಘಗಳು, ಸ್ವಸಹಾಯ ಸಂಘಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಅದರಲ್ಲೂ ಮುಖ್ಯವಾಗಿ ನಂಬಿದ ಭೂತಾಯಿ ಎಂದಿಗೂ ಕೈಬಿಡುವುದಿಲ್ಲವೆಂಬ ನಂಬಿಕೆ, ಮುಂದಿನ ಪೀಳಿಗೆಯ ಒಳಿತು ಬಯಸುವ ತತ್ವಾದರ್ಶ, ಮೈಮುರಿದು ದುಡಿಯವ ಗುಣಗಳನ್ನು ರೈತರು ಮೈಗೂಡಿಸಿಕೊಳ್ಳುವುದು ಅಷ್ಟೇ ಮುಖ್ಯವೆಂದು ಎತ್ತಿತೋರಿಸಿತು.

ಪ್ರೇರಣೆ: ಹೈನುಗಾರಿಕೆ, ಪಶುಪಾಲನೆ ಕ್ಷೇತ್ರಗಳ ತಜ್ಞರು, ಆಹಾರ ಪರಿಣಿತರ ಚಿಂತನೆಧಾರೆ, ಪ್ರಗತಿಪರ ರೈತರ ಜೀವನಾನುಭವಗಳು, ಉಪ ಉತ್ಪನ್ನಗಳ ಮೂಲಕ ಲಾಭ ಮಾಡಿಕೊಂಡ ಪರಿಯನ್ನು ಬಿಚ್ಚಿಟ್ಟು ನೆರೆದ ರೈತರಿಗೆ ಪ್ರೇರಣೆ ನೀಡಿದರು. ಕೃಷಿಯಿಂದ ವಿಮುಖವಾಗುವ, ಇದ್ದ ಜಮೀನಿನಲ್ಲಿ ತಾನು ಮಾತ್ರ ದುಡಿದು, ಮಕ್ಕಳನ್ನು ಬೇರೊಂದು ಕೆಲಸಕ್ಕೆ ಕಳುಹಿಸಿ ಅಲ್ಪ ಸಂಪಾದನೆ ತೃಪ್ತಿ ಮನೋಭಾವದಿಂದ ರೈತರು ಬರುವುದಕ್ಕೂ ಮಾರ್ಗದರ್ಶಕರು ಒತ್ತಾಸೆ ನೀಡಿದರು. ಸರ್ಕಾರ ಅಥವಾ ಬೇರೆ ಯಾರೋ ಬಂದು ಉದ್ಧಾರ ಮಾಡಬೇಕು ಎಂದು ರೈತರು ಕಾಯಬೇಕಾಗಿಲ್ಲ. ಸಾಲಮನ್ನಾದಂತಹ ಅಲ್ಪಾವಧಿ ಪರಿಹಾರಗಳಿಗೂ ಅವಲಂಬಿತರಾಬೇಕಾಗಿಲ್ಲ. ಸಾಧಕರು ತಮ್ಮೊಂದಿಗೆ ಉಳಿದವರನ್ನ ಕರೆದೊಯ್ಯುವ, ಮಾರುಕಟ್ಟೆಗಳ ಎಲ್ಲ ಬೆಳವಣಿಗೆಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದರೆ ಸುಭಿಕ್ಷ ಜೀವನಕ್ಕೆ ಕೃಷಿ ಆಧಾರಸ್ತಂಭವಾಗಲಿದೆ ಎಂಬ ಸಕಾರಾತ್ಮಕತೆಯನ್ನು ಈ ಮೇಳ ಬಿತ್ತಿದ್ದು, ಹುಲುಸಾಗಿ ಬೆಳೆಯುವ ನಿರೀಕ್ಷೆಯನ್ನೂ ಕಟ್ಟಿಕೊಟ್ಟಿದೆ.

ದತ್ತಾಂಶದ ಸವಲತ್ತು, ಆಳ್ವಿಕೆಯ ತಾಕತ್ತು

ಪ್ರದೇಶ, ಜಿಲ್ಲೆಯ ವಿಶೇಷತೆ, ವೈಯಕ್ತಿಕ ಬೇಕು-ಬೇಡಗಳ, ಅಭಿರುಚಿಗಳ ದತ್ತಾಂಶದ ಬಲ್ಲವನ ದೌಲತ್ತು, ಕೃಷಿ, ಉದ್ಯಮ-ವಹಿವಾಟು ಸೇರಿ ಜಗತ್ತನ್ನು ಆಳುವ ತಾಕತ್ತು ಕೂಡ ಹೌದು ಎಂದು ಫ್ರೀಡಂ ಆಪ್ ಸಂಸ್ಥಾಪಕ, ಸಿಇಒ ಸಿ.ಎಸ್.ಸುಧೀರ್ ವ್ಯಾಖ್ಯಾನಿಸಿದರು. ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳ ಮೂಲಕ ರೈತಾರ್ಪಿ ವರ್ಗಕ್ಕೆ ಲಾಭದಾಯಕ ಕೃಷಿಗೆ ಇರುವ ಅವಕಾಶಗಳನ್ನು ತಿಳಿಸುತ್ತಲೇ, ಮಾರ್ಗದರ್ಶಕ (ಮೆಂಟರ್)ರ ರೀತಿಯಲ್ಲಿ ನೆರೆದ ರೈತರಿಗೆ ಪರೋಕ್ಷ ಕೌನ್ಸೆಲಿಂಗ್ ಕೂಡ ಮಾಡಿದರು.

ಶಕ್ತರು, ಶಕ್ತಿವಂತರು: ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಇ.ಕಾಮರ್ಸ್ ಇತ್ಯಾದಿ ವೇದಿಕೆಗಳನ್ನು ನಿರ್ವಹಿಸಿ ಕೋಟಿಗಟ್ಟಲೇ ಸಂಪಾದಿಸಲು ಸಾಧ್ಯವಾಗಿದ್ದು, ಅಮೂಲ್ಯವಾದ ಜಮೀನು ಹಾಗೂ ಸ್ಥಳೀಯ ಸಂಪತ್ತು ಹೊಂದಿರುವ ರೈತರು ಅವರಿಗಿಂತ ಶಕ್ತಿವಂತರಾಗಿದ್ದು, ಶ್ರೀಮಂತರಾಗಲು ಶಕ್ತರಾಗಿದ್ದಾರೆ. ಮಾಡಬೇಕೆದ್ದಿಷ್ಟೇ, ಕೃಷಿ ಲಾಭದಾಯಕವಲ್ಲ ಎಂಬುದನ್ನು ತಲೆಯಿಂದ ತೆಗೆದುಹಾಕಬೇಕು. ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಯಾವ ಸತ್ವದ ಕೊರತೆಯಿಂದ ಎಂದು ತಿಳಿದುಕೊಳ್ಳಬೇಕು. ಅದಕ್ಕೆ ಸೂಕ್ತವಾದ ಬೆಳೆ ಆಯ್ಕೆ ಜತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ವರ್ಷಪೂರ್ತಿ ದುಡಿಮೆ, ಕೈಯ್ಯಲ್ಲಿ ನಿರಂತರವಾಗಿ ಹಣ ಹರಿದಾಡುತ್ತದೆ. ಜಮೀನನ್ನು ಕಾರ್ಖಾನೆ ರೀತಿಯಲ್ಲಿ ದುಡಿಸಿಕೊಳ್ಳಬೇಕು. ಅದರ ಒಡೆಯ ರೈತ ಒಂದು ಕಂಪನಿ ಮಾಲೀಕನ ರೀತಿಯಲ್ಲಿ ಎಲ್ಲ ಕೌಶಲ, ಒಂದು ಉತ್ಪನ್ನದಲ್ಲಿ ಲಭ್ಯವಿರುವ ಹಲವು ಉತ್ಪನ್ನಗಳನ್ನು ತಿಳಿದುಕೊಂಡು ಮೌಲ್ಯ ವರ್ಧಿಸಿ, ವ್ಯಾಪಾರ-ವಹವಾಟಿನ ಪಟ್ಟುಗಳನ್ನು ತಿಳಿದುಕೊಂಡರೆ ಸುಸ್ಥಿರ ಕೃಷಿ, ಉತ್ತಮಗುಣಮಟ್ಟದ ಜೀವನ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ರೈತ ಸಾಧಕರಿಗೆ ವಿಜಯವಾಣಿ ಸನ್ಮಾನ: ಹೊಸತನ್ನು ಪರಿಚಯಿಸುವ, ವೈಜ್ಞಾನಿಕ ಮಾಹಿತಿ ನೀಡುವ, ಇಲಾಖೆ ಜತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಹಂಚಿಕೆ ಜತೆಗೆ ಸಾಧಕ ರೈತರನ್ನು ಗುರುತಿಸಿ ವೇದಿಕೆಗೆ ಕರೆತಂದು ಸನ್ಮಾನಿಸಿದ್ದು ಮತ್ತೊಂದು ಮಜಲು. ವಿಜಯವಾಣಿ, ದಿಗ್ವಿಜಯ ನ್ಯೂಸ್​ನ ಈ ಪ್ರಯತ್ನವನ್ನು ಕೃಷಿ ಹಿತಚಿಂತಕರು, ವಿಚಾರವಾದಿ ರೈತರು ಕೊಂಡಾಡಿದರು. ಸಾಧಕ ರೈತರಿಗೆ ಫ್ರೀಡಂ ಆಪ್ ಸಂಸ್ಥಾಪಕ ಮತ್ತು ಸಿಇಒ ಸಿ.ಎಸ್.ಸುಧೀರ್, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ.ನಿಂಗರಾಜುಗೌಡ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ, ಮೈಸೂರು ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಶಸ್ತಿಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು.

ಕೊನೇದಿನ ಜನಸಂದಣಿ: ಕೃಷಿ ಮೇಳದ ಮೂರನೇ ಹಾಗೂ ಅಂತಿಮ ದಿನದಂದು ಕಣ್ಣು ಹಾಯಿಸಿದಷ್ಟೂ ಜನಸಂದಣಿ. ಕೃಷಿ ಸಾಧನಗಳು, ಹೊಸ ಮಾದರಿ ಯಂತ್ರೋಪಕರಣಗಳ ಮಳಿಗೆಗಳು ಕಿಕ್ಕಿರಿದಿದ್ದವು. ತಾರಸಿ ತೋಟ, ಕುಂಡ ಕೃಷಿ ವಿಧಾನದ ತಿಳಿದುಕೊಳ್ಳಲೆಂದು ಆಸಕ್ತರು ನೆರೆದಿದ್ದರೆ, ಹಲಸು ಸೇರಿ ವಿವಿಧ ಹಣ್ಣಿನ ಸಸಿಗಳು, ಬಿತ್ತನೆ ಬೀಜಗಳ ಖರೀದಿ ಭರಾಟೆಯಿತ್ತು. ಸಿರಿಧಾನ್ಯ, ತರಕಾರಿ, ಹಣ್ಣು ಮತ್ತಿತರ ಉತ್ಪನ್ನಗಳನ್ನು ಉಪಯೋಗಿಸಿ ತಯಾರಿಸಿ ಸತ್ವಯುತ ಸಿದ್ಧ ಆಹಾರ ಪೊಟ್ಟಣ, ತಿಂಡಿ-ತಿನಿಸುಗಳು, ಮನೆ ಬಳಕೆ ವಸ್ತುಗಳನ್ನು ಖರೀದಿಸುವವರ ಸಾಲಿನಲ್ಲಿ ಮಹಿಳೆಯರೇ ಮುಂದಿದ್ದರು. ವಾರದ ರಜೆಯು ಮಳಿಗೆಗಳಿಗೆ ಹೆಚ್ಚಿನ ಕಳೆ ತುಂಬಿಕೊಟ್ಟಿತ್ತು.

ಮನಸೂರೆಗೊಂಡ ಕಿಂದರಿಜೋಗಿ ನಾಟಕ

ಮೈಸೂರು: ಶಕ್ತಿಧಾಮ ಶಾಲೆಯ ಮಕ್ಕಳು ಅಭಿನಯಿಸಿದ ಬೊಮ್ಮನಹಳ್ಳಿ ಕಿಂದರಿಜೋಗಿ ನಾಟಕ ನೋಡುಗರ ಮನಸೂರೆಗೊಂಡಿತು. ಸಂಜೆ ಸಂಚಲನ ತಂಡದ ದೀಪಕ್ ನಿರ್ದೇಶನ, ಕುವೆಂಪು ರಚಿತ ನಾಟಕವು ಪ್ರೇಕ್ಷಕರನ್ನು ತನ್ನತ್ತ ಸೆಳೆಯಿತು. ಶಾಲೆಯ 42 ಮಕ್ಕಳು ತಮ್ಮ ಅತ್ಯುತ್ತಮ ಅಭಿನಯದಿಂದ ಎಲ್ಲರ ಚಪ್ಪಾಳೆ ಗಿಟ್ಟಿಸಲು ಯಶಸ್ವಿಯಾದರು. ‘ಸೋಜುಗಾದ ಸೂಜಿ ಮಲ್ಲಿಗೆ..’ ಹಾಡಿನ ಮೂಲಕ ಆರಂಭವಾದ ನಾಟಕ ಸುಮಾರು ಒಂದು ತಾಸು ನಡೆಯಿತು. ಅಂತಿಮವಾಗಿ ‘ಸತ್ಯವನ್ನು ತ್ಯಜಿಸಿ ಬದುಕಬಾರದು’ ಎಂಬ ಸಂದೇಶವನ್ನು ಸಾರಿದರು. ಶಕ್ತಿಧಾಮ ಸಂಸ್ಥೆಯ ಅಧ್ಯಕ್ಷೆ ಗೀತಾ ಶಿವರಾಜ್​ಕುಮಾರ್ ಹಾಜರಿದ್ದು ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಿಂದರಜೋಗಿ ನಾಟಕ ಪ್ರದರ್ಶಿಸಿದ ಶಕ್ತಿಧಾಮ ಮಕ್ಕಳೊಂದಿಗೆ ಗೀತಾ ಶಿವರಾಜಕುಮಾರ್.

ಮೇಳ ದಿನಗಳು ಮೂರು, ಹೆಜ್ಜೆಗುರುತು ನೂರಾರು

ಹರಿಯುವ ನದಿಗೆ ಮೈಯೆಲ್ಲ ಕಣ್ಣು, ಸಾವಿರಾರು ಕಾಲುಗಳು ಎನ್ನುವಂತೆ ಮೂರು ದಿನಗಳ ರಾಜ್ಯಮಟ್ಟದ ಕೃಷಿ ಮೇಳ ಸಾಗಿ ಬಂದ ದಾರಿ ಅವಲೋಕಿಸಿದರೆ ಮುಂದಿನ ದಾರಿ ಸಲೀಸಾಗಲು ನೂರಾರು ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಆ ಪೈಕಿ ಕೆಲವು ಮುಖ್ಯಾಂಶಗಳು ಇಲ್ಲಿವೆ.

  • ದುಬಾರಿ ಬಡ್ಡಿ ದರದ ಖಾಸಗಿ ಸಾಲದಿಂದ ಮುಕ್ತಗೊಳಿಸಲು ಕೃಷಿ ಸಾಲ ವ್ಯವಸ್ಥೆ ಆಮೂಲಾಗ್ರ ಬದಲಾವಣೆಗೆ ಸಿಎಂ ಭರವಸೆ
  • ಬೆಲೆ ನೋಡಿ ಬೆಳೆ ಆಯ್ಕೆ, ಬಿತ್ತನೆ ಪ್ರಮಾಣ ನಿಗದಿಗೆ ವೈಜ್ಞಾನಿಕ ಮುನ್ನಂದಾಜು ಬೆಲೆ ಮಾಹಿತಿ ಶೀಘ್ರವೇ ಲಭ್ಯ.
  • ಬೇಸಾಯ ಪದ್ಧತಿಯಲ್ಲಿ ಒಂದಿಷ್ಟು ಜಾಣ್ಮೆ, ತಾಳ್ಮೆ ರೂಢಿಸಿಕೊಂಡರೆ ಉತ್ಪಾದನೆ ಜತೆಗೆ ಮಾರಾಟದಲ್ಲೂ ಗೆಲುವು ನಿಶ್ಚಿತ.
  • ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಆಗುಮಾಡಿಕೊಡುವ ಎಲ್ಲ ಪ್ರಯತ್ನಗಳನ್ನು ಸ್ವಂತದ್ದಾಗಿಸಿಕೊಳ್ಳುವ ಛಲ ಮುಖ್ಯ.
  • ಸರ್ಕಾರದ ಸವಲತ್ತು, ಸಹಾಯಧನಗಳು ಬೆಳೆಯುವುದಕ್ಕೆ ಊರುಗೋಲಷ್ಟೇ, ಅವುಗಳ ಮೇಲೆ ಅತಿ ಅವಲಂಬನೆ ಸಲ್ಲದು
  • ಕೃಷಿ ಲಾಭದಾಯಕವಲ್ಲ ಎಂಬುದು ಮಿಥ್ಯ, ಜ್ಞಾನವೇ ಬಂಡವಾಳ ಹಾಗೂ ಕಾಯಕವೇ ಕೈಲಾಸ ಎನ್ನುವುದು ಮಾತ್ರ ಸತ್ಯ.
  • ಆಹಾರಧಾನ್ಯಗಳ ಸಂಸ್ಕರಣೆ, ಉತ್ಪನ್ನಗಳ ಮೌಲ್ಯವರ್ಧನೆ, ಗ್ರಾಹಕರಿಗೆ ನೇರ ಮಾರಾಟದಿಂದ ದುಪ್ಪಟ್ಟು ಆದಾಯ ಖಚಿತ.
  • ಉತ್ಪಾದನೆಗೆ ನೈಪುಣ್ಯತೆ ಸ್ಪರ್ಶ, ಮಾರುಕಟ್ಟೆಯ ತಂತ್ರಗಾರಿಕೆ ಅಳವಡಿಸಿಕೊಂಡರೆ ‘ಅನ್ನದಾತಾ ಸುಖೀಭವ’ ಅರ್ಥಪೂರ್ಣ.
  • ಸಮಸ್ತ ಜೀವ ಸಂಕುಲದ ಹಿತ, ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಬೇಸಾಯವೇ ಗಟ್ಟಿ ತಳಪಾಯ.
  • ದೇಶದ ಜಿಡಿಪಿಗೆ ಪಾಲು, ಉದ್ಯೋಗ ಸೃಷ್ಟಿಯಲ್ಲಿ ಪಾರಮ್ಯ ಮೆರೆಯಲು, ಸ್ವಸ್ಥ ಜೀವನ ಕಟ್ಟಿಕೊಡಲು ಕೃಷಿಗೆ ವಿಪುಲ ಅವಕಾಶ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net