ಭೀಕರ ಅಪಘಾತ: ಊರಲ್ಲಿ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ ತಂದೆ-ಮಗಳ ಸಾವು

Accident
Published on

ತುಮಕೂರು: ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ಮಗಳು ಇಬ್ಬರೂ ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಈ ಭಾರಿ ಅವಘಡ ಸಂಭವಿಸಿದೆ.

ಬೆಂಗಳೂರಿನ ಸುಂಕದಕಟ್ಟೆ ಬಳಿ ವಾಸವಾಗಿದ್ದ ತಿರುಮಲೇಗೌಡ (50), ಚಂದನ (20) ಮೃತ ದುರ್ದೈವಿಗಳು. ಇವರು ಇಂದು ತಮ್ಮ ಊರಾದ ಗುಬ್ಬಿ ತಾಲೂಕಿನ ಸಿಎಸ್​ಪುರ ಬಳಿಯ ನೆಟ್ಟಿಗೆರೆ ಗ್ರಾಮದಲ್ಲಿ ಹಬ್ಬ ಮುಗಿಸಿಕೊಂಡು ಬೈಕ್​​ನಲ್ಲಿ ಬೆಂಗಳೂರಿಗೆ ಮರಳುವಾಗ ಈ ಅಪಘಾತ ಸಂಭವಿಸಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬನ್ನಿಮರದ ಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ತಿರುಮಲೇಗೌಡ ಸ್ಥಳದಲ್ಲೇ ಸಾವಿಗೀಡಾದರೆ, ಪುತ್ರಿ ಚಂದನಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಳು. ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನಿಸಲಾಗಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net